×
Ad

ಅಸ್ಸಾಮ್: 667 ಕಟುಂಬಗಳ ಮನೆಗಳನ್ನು ಕೆಡವಲು ಧ್ವಂಸ ಕಾರ್ಯಾಚರಣೆ ಆರಂಭ

Update: 2025-06-16 22:07 IST

PC : PTI

ಗುವಾಹಟಿ: ಅಸ್ಸಾಮ್ ನ ಗೋಲ್ಪಾರ ಜಿಲ್ಲೆಯಲ್ಲಿ ರಾಜ್ಯ ಸರಕಾರ ಸೋಮವಾರ ಭೂ ಅತಿಕ್ರಮಣ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದು, 667 ಕುಟುಂಬಗಳ ಮನೆಗಳನ್ನು ಕೆಡವಲಿದೆ. ಈ ಪೈಕಿ ಹೆಚ್ಚಿನ ಮನೆಗಳು ಬಾಂಗ್ಲಾ ಮೂಲದ ಮುಸ್ಲಿಮರಿಗೆ ಸೇರಿದ್ದಾಗಿವೆ.

ಹಸಿಲ ಬೀಲ್ ಪ್ರದೇಶದ ಅತಿಕ್ರಮಿತ ಜಮೀನಿನಲ್ಲಿದ್ದ 45 ಶೇಕಡ ಮನೆಗಳನ್ನು ಸೋಮವಾರ ಕೆಡವಲಾಗಿದೆ ಎಂದು ಗೋಲ್ಪಾರ ಜಿಲ್ಲಾಧಿಕಾರಿ ಖನೀಂದ್ರ ಚೌಧರಿ ‘scroll.in’ಗೆ ತಿಳಿಸಿದರು. ಉಳಿದ ಮನೆಗಳನ್ನು ಕೆಡವಲು ಧ್ವಂಸ ಅಭಿಯಾನವನ್ನು ಮಂಗಳವಾರ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

‘‘ಅತ್ರಿಕ್ರಮಣಕಾರರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ ಮತ್ತು ಈವರೆಗೆ ಯಾವುದೇ ಅನಪೇಕ್ಷಿತ ಘಟನೆ ವರದಿಯಾಗಿಲ್ಲ’’ ಎಂದು ಚೌಧರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಗ್ರಾಮಸ್ಥರಿಗೆ ತೆರವು ನೋಟಿಸ್ಗಳನ್ನು 2023 ಮತ್ತು 2024ರಲ್ಲಿ ನೀಡಲಾಗಿತ್ತು ಹಾಗೂ ಅವರಿಗೆ ‘‘ಜೌಗುಪ್ರದೇಶ’’ವನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಎಂದು ಚೌಧರಿ ಹೇಳಿದರು.

‘‘ನಾವು ಅವರಿಗೆ ಶುಕ್ರವಾರ ಇನ್ನೊಮ್ಮೆ ನೋಟಿಸ್ ಗಳನ್ನು ನೀಡಿ ಸೋಮವಾರ ಬೆಳಗ್ಗಿನ ವೇಳೆಗೆ ಮನೆಗಳನ್ನು ಖಾಲಿಮಾಡುವಂತೆ ಸೂಚಿಸಿದ್ದೆವು’’ ಎಂದರು.

ಹೆಚ್ಚಿನ ಕುಟುಂಬಗಳು ತಮ್ಮ ವಸ್ತುಗಳೊಂದಿಗೆ ಗ್ರಾಮವನ್ನು ತೊರೆದಿವೆ. ಕೆಲವು ಕುಟುಂಬಗಳು ತಮಗೆ ಪುನರ್ವಸತಿ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿವೆ.

ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಗೋಲ್ ಪಾರ ಪೂರ್ವ ಶಾಸಕ ಎ.ಕೆ. ರಶೀದ್ ಅಲಮ್ ಕೂಡ ಜಿಲ್ಲಾಧಿಕಾರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಈ ಕುಟುಂಬಗಳು 70 ವರ್ಷಗಳಿಂದ ಇಲ್ಲಿ ವಾಸಿಸುತ್ತಿವೆ ಎಂದು ಅವರು ಹೇಳಿದ್ದಾರೆ.

2016ರಲ್ಲಿ ಅಸ್ಸಾಮ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ 10,620ಕ್ಕೂ ಕುಟುಂಬಗಳನ್ನು ಸರಕಾರಿ ಭೂಮಿಯಿಂದ ಹೊರದಬ್ಬಲಾಗಿದೆ. ಇವುಗಳ ಪೈಕಿ ಹೆಚ್ಚಿನವು ಮುಸ್ಲಿಮ್ ಕುಟುಂಬಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News