Assam | CAA ಅಡಿ ಭಾರತೀಯ ಪೌರತ್ವ ಪಡೆದ ಇನ್ನೂ ಇಬ್ಬರು ಬಾಂಗ್ಲಾದೇಶಿಗಳು
ಸಾಂದರ್ಭಿಕ ಚಿತ್ರ | Photo Credit ; PTI
ಗುವಾಹಟಿ,ಡಿ.14: ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ CAA ಅಡಿ ಭಾರತೀಯ ಪೌರತ್ವವನ್ನು ಮಂಜೂರು ಮಾಲಾಗಿದ್ದು, ಇದರೊಂದಿಗೆ ಈ ಕಾಯ್ದೆಯಡಿ ಅಸ್ಸಾಮಿನಲ್ಲಿ ಪೌರತ್ವ ಪಡೆದವರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಅಸ್ಸಾಮಿನಲ್ಲಿ ಈ ಕಾಯ್ದೆಯಡಿ ಓರ್ವ ಮಹಿಳೆಗೆ ಪೌರತ್ವವನ್ನು ಮಂಜೂರು ಮಾಡಲಾಗಿದೆ ಎಂದು ಸಿಲ್ಚಾರ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯ ಸದಸ್ಯರೂ ಆಗಿರುವ ಹಿರಿಯ ವಕೀಲ ಧರ್ಮಾನಂದ ದೇಬ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
40ರ ಹರೆಯದ ಮಹಿಳೆ 2007ರಲ್ಲಿ ಬಾಂಗ್ಲಾದೇಶದಿಂದ ಭಾರತವನ್ನು ಪ್ರವೇಶಿಸಿ ಶ್ರೀಭೂಮಿಯಲ್ಲಿ ವಾಸವಾಗಿದ್ದರೆ,61ರ ಹರೆಯದ ಪುರುಷ 1975ರಲ್ಲಿ ಭಾರತಕ್ಕೆ ಆಗಮಿಸಿದ್ದು, ಕಾಚಾರ್‌ನಲ್ಲಿ ವಾಸವಾಗಿದ್ದ ಎಂದರು.
ಗೃಹ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಮಾಣ ಪತ್ರಗಳನ್ನು ವಿತರಿಸಿದ್ದು,ಅವರು ಭಾರತವನ್ನು ಪ್ರವೇಶಿಸಿದ ದಿನದಿಂದಲೇ ಪೌರತ್ವ ಜಾರಿಗೆ ಬಂದಿದೆ ಎಂದು ಪರಿಗಣಿಸಲಾಗಿದೆ ಎಂದು ದೇಬ್ ತಿಳಿಸಿದರು. ಸಾಮಾಜಿಕ ಕಿರುಕುಳದ ಸಾಧ್ಯತೆಯನ್ನು ಉಲ್ಲೇಖಿಸಿ ಅವರ ಹೆಸರುಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದರು.
ಬಾಂಗಾದೇಶದ ಚಿತ್ತಗಾಂಗ್ ಮೂಲದ ಮಹಿಳೆ ತನ್ನ ಕುಟುಂಬ ಸದಸ್ಯರೋರ್ವರ ಜೊತೆಗೆ ಚಿಕಿತ್ಸೆಗಾಗಿ ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಂದಿದ್ದಳು. ಶ್ರೀಭೂಮಿಯಲ್ಲಿ ವ್ಯಕ್ತಿಯೋರ್ವನನ್ನು ಭೇಟಿಯಾಗಿದ್ದ ಆಕೆ ಆತನನ್ನು ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಗಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು.
ಕಳೆದ ವರ್ಷ ಸಿಎಎ ನಿಯಮಗಳನ್ನು ಅಧಿಸೂಚಿಸಿದ ಬಳಿಕ ಆಕೆ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಳು ಎಂದು ದೇಬ್ ತಿಳಿಸಿದರು.
ಇನ್ನೋರ್ವ ವ್ಯಕ್ತಿ ತನ್ನ 11ನೇ ವಯಸ್ಸಿನಲ್ಲಿ ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯಿಂದ ಭಾರತಕ್ಕೆ ಆಗಮಿಸಿದ್ದು,ಬಳಿಕ ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಇಲ್ಲಿಯೇ ಸಂಸಾರವನ್ನು ಹೊಂದಿದ್ದಾನೆ ಎಂದರು.