ಬಾಂಗ್ಲಾದೇಶ ರಚನೆಯ ನಂತರದ ಪರಿಸ್ಥಿತಿಯನ್ನು ಇಂದಿರಾ ಗಾಂಧಿ ತಪ್ಪಾಗಿ ನಿರ್ವಹಿಸಿದ್ದರು: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮ | PTI
ಹೊಸದಿಲ್ಲಿ: ಬಾಂಗ್ಲಾದೇಶ ರಚನೆಗೆ ಕಾರಣವಾಗಿದ್ದ 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತವು ಜಯಗಳಿಸಿದ ನಂತರದ ಪರಿಸ್ಥಿತಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಪ್ಪಾಗಿ ನಿರ್ವಹಿಸಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರತಿಪಾದಿಸಿದ್ದಾರೆ.
‘ಇಂದಿರಾ ಗಾಂಧಿಯವರು ಇಂದು ಜೀವಂತವಾಗಿದ್ದರೆ ನಮ್ಮ ಸಶಸ್ತ್ರ ಪಡೆಗಳ ನಿರ್ಣಾಯಕ ಗೆಲುವನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ದೇಶವು ಅವರನ್ನು ಪ್ರಶ್ನಿಸುತ್ತಿತ್ತು. ಬಾಂಗ್ಲಾದೇಶದ ಸೃಷ್ಟಿಯು ಚೌಕಾಶಿಯ ವಿಷಯವಾಗಿರಲಿಲ್ಲ, ಅದು ನಾವು ಕಳೆದುಕೊಂಡಿದ್ದ ಐತಿಹಾಸಿಕ ಅವಕಾಶವಾಗಿತ್ತು’ ಎಂದು ಶರ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ಉದ್ವಿಗ್ನತೆಗಳು ಮತ್ತು ನಾಲ್ಕು ದಿನಗಳ ಮಿಲಿಟರಿ ಉದ್ವಿಗ್ನತೆಯನ್ನು ಅಂತ್ಯಗೊಳಿಸಲು ಉಭಯ ದೇಶಗಳ ನಡುವೆ ಕದನ ವಿರಾಮದ ಹಿನ್ನೆಲೆಯಲ್ಲಿ 1971ರ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ನಿಲುವನ್ನು ಹಲವಾರು ಕಾಂಗ್ರೆಸ್ ನಾಯಕರು ಪ್ರಶಂಸಿಸಿದ ಬಳಿಕ ಶರ್ಮಾರ ಈ ಹೇಳಿಕೆ ಹೊರಬಿದ್ದಿದೆ.
1971ರಲ್ಲಿ ಭಾರತದ ಮಿಲಿಟರಿ ವಿಜಯವು ವ್ಯೆಹಾತ್ಮಕ ದೂರದೃಷ್ಟಿಗೆ ಅನುಗುಣವಾಗಿರಲಿಲ್ಲ ಎಂದು ಆರೋಪಿಸಿರುವ ಶರ್ಮಾ,ಹೊಸ ಪ್ರಾದೇಶಿಕ ವ್ಯವಸ್ಥೆಯನ್ನು ರಚಿಸುವ ಸಾಧ್ಯತೆಯನ್ನು ಏಕಪಕ್ಷೀಯ ಉದಾರತೆಯ ಕ್ರಮಕ್ಕೆ ಇಳಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಶರ್ಮಾರ ಪೋಸ್ಟ್ ಕಳೆದ ಐದು ದಶಕಗಳಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಸಂಬಂಧಗಳಲ್ಲಿಯ ದೀರ್ಘಕಾಲಿಕ ಸಮಸ್ಯೆಗಳತ್ತ ಬೆಟ್ಟು ಮಾಡಿದೆ. ವಿಮೋಚನೆಯ ಸಂದರ್ಭದಲ್ಲಿ ಭಾರತವು ಜಾತ್ಯತೀತ ಬಾಂಗ್ಲಾದೇಶವನ್ನು ಬೆಂಬಲಿಸಿದ್ದರೆ 1988ರಲ್ಲಿ ಇಸ್ಲಾಮನ್ನು ಬಾಂಗ್ಲಾದೇಶದ ರಾಷ್ಟ್ರೀಯ ಧರ್ಮವನ್ನಾಗಿ ಘೋಷಿಸಲಾಗಿತ್ತು ಎಂದು ಶರ್ಮಾ ಹೇಳಿದ್ದಾರೆ.