ಅಸ್ಸಾಂ ಸರಕಾರವು ಉಡುಗೊರೆಯಾಗಿ ನೀಡಿದ್ದ ಮೊಬೈಲ್‌ಗಳನ್ನು ಮರಳಿಸಿದ ಪತ್ರಕರ್ತರು
ಹಿಮಂತ ಬಿಸ್ವ ಶರ್ಮಾ | Photo Credit : PTI
ಗುವಾಹಟಿ: ಗುರುವಾರ ಅಸ್ಸಾಂ ಸರಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ಮೊಬೈಲ್ ಫೋನ್ ಸ್ವೀಕರಿಸಿದ್ದ ಕನಿಷ್ಠ ಇಬ್ಬರು ಪತ್ರಕರ್ತರು ಅವುಗಳನ್ನು ವಾಪಸ್ ಮಾಡಿದ್ದಾರೆ.
ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದಲ್ಲಿ (ಡಿಐಪಿಆರ್) ನೋಂದಾಯಿತ 2,200ಕ್ಕೂ ಅಧಿಕ ಪತ್ರಕರ್ತರಿಗೆ ಮೊಬೈಲ್ ಫೋನ್‌ಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗುರುವಾರ ಗುವಾಹಟಿಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಲವು ಪತ್ರಕರ್ತರಿಗೆ ಫೋನ್‌ಗಳನ್ನ ನೀಡಲಾಗಿದ್ದು, ಉಳಿದವರು ಜ.14ರಂದು ಮಾಘ ಬಿಹು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಂದ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಅಸ್ಸಾಮಿನಲ್ಲಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ.
ಡಿಐಪಿಆರ್ ಕಾರ್ಡ್‌ಗಳನ್ನು ಹೊಂದಿರುವ ಎಲ್ಲ ಪತ್ರಕರ್ತರು ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್17 ಫೋನ್‌ಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದ ಅಧಿಕಾರಿ,‘ಪ್ರತಿ ವರ್ಷವೂ ನಾವು ಪತ್ರಕರ್ತರಿಗೆ ಏನಾದರೂ ಉಡುಗೊರೆಗಳನ್ನು ನೀಡುತ್ತೇವೆ. ನಾವು ಲ್ಯಾಪ್‌ಟಾಪ್ ಬ್ಯಾಗ್‌ಗಳು,ಲೆದರ್ ಬ್ಯಾಗ್‌ಗಳು,ನೀರಿನ ಬಾಟಲ್ ಇತ್ಯಾದಿಗಳನ್ನು ನೀಡಿದ್ದೇವೆ’ ಎಂದರು.
ಉಡುಗೊರೆಯಾಗಿ ನೀಡಲಾಗುತ್ತಿರುವ ಫೋನ್‌ಗಳ ಆನ್‌ಲೈನ್ ಬೆಲೆಗಳು 12,600 ರೂ.ಗಳಿಂದ 16,000 ರೂ.ಗಳವರೆಗಿದೆ.
ಈವರೆಗೆ ಟೆಲಿಗ್ರಾಫ್‌ನ ಉಮಾನಂದ ಜೈಸ್ವಾಲ್ ಮತ್ತು ದಿ ಇಕನಾಮಿಕ್ ಟೈಮ್ಸ್‌ನ ಬಿಕಾಶ ಸಿಂಗ್ ಅವರು ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್‌ಗಳನ್ನು ಮರಳಿಸಿದ್ದಾರೆ.
2011ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೂ ಮಾನ್ಯತೆ ಪಡೆದ ಮತ್ತು ವೃತ್ತಿಯಲ್ಲಿ 10 ವರ್ಷಗಳನ್ನು ಪೂರೈಸಿದ ಪತ್ರಕರ್ತರಿಗೆ ಲ್ಯಾಪ್‌ಟಾಪ್‌ಗಳನ್ನು ಉಡುಗೊರೆಯಾಗಿ ನೀಡಿತ್ತು.