ಅಸ್ಸಾಂ | ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು ; ಪೊಲೀಸ್ ಹೊರ ಠಾಣೆಗೆ ಕಲ್ಲು ತೂರಾಟ ನಡೆಸಿದ 15 ಮಂದಿಯ ಬಂಧನ

Update: 2024-05-25 15:32 GMT

ಸಾಂದರ್ಭಿಕ ಚಿತ್ರ 

 

ಗುವಾಹಟಿ: ಈ ವಾರ ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿರುವ ಪೊಲೀಸ್ ಹೊರ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಜ್ಞಾನೇಂದ್ರ ಪ್ರತಾಪ್ ಸಿಂಗ್ ಶನಿವಾರ ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ನಡೆಸಿ ಬೆಂಕಿ ಹಚ್ಚಲು ಸಿದ್ಧಪಡಿಸಿ ಇರಿಸಿಕೊಂಡಿದ್ದ ಸಾಮಗ್ರಿಗಳನ್ನು ಗುಂಪಿನಿಂದ ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಪೊಲೀಸರು ಸಿಸಿಟಿವಿ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಂಗ್ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಾವಿಗೆ ಸಂಬಂಧಿಸಿ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತನ್ನು ಹಿಂಪಡೆಯಲು ಆದೇಶಗಳನ್ನು ನೀಡಲಾಗಿದೆ ಎಂದು ಸಿಂಗ್ ಅವರು ತಿಳಿಸಿದ್ದಾರೆ.

ಲಖಿಂಪುರದ ದಕ್ಷಿಣ ಚಂದಮಾರಿ ಗ್ರಾಮದ ನಿವಾಸಿ 42 ವರ್ಷದ ಅರ್ಶಬ್ ಅಲಿ ಬುಧವಾರ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಮೊಬೈಲ್ ಫೋನ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇತರ ನಾಲ್ವರೊಂದಿಗೆ ಅರ್ಶಬ್ ಅಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಂತರ ಅವರನ್ನು ಖೆಲ್ಮಾಟಿ ಪೊಲೀಸ್ ಹೊರ ಠಾಣೆಗೆ ಕರೆದೊಯ್ಯಲಾಗಿತ್ತು.

ಮೊಬೈಲ್ ಫೋನ್ ಕಳವು ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಐವರ ಪೈಕಿ ಇಬ್ಬರು ಪ್ರಧಾನ ಆರೋಪಿಗಳಾಗಿದ್ದರು. ಅಲಿ ಸೇರಿದಂತೆ ಇತರ ಮೂವರು ಕಳವುಗೈದ ಫೋನ್ ಅನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಪೊಲೀಸ್ ಅಧಿಕಾರಿಯ ಪ್ರಕಾರ, ಪೊಲೀಸ್ ಹೊರಠಾಣೆಯಲ್ಲಿ ಗುರುವಾರ ಬೆಳಗ್ಗೆ ಬೆಂಚ್‌ನಲ್ಲಿ ಕುಳಿದುಕೊಂಡಿದ್ದ ಅಲಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಕೂಡಲೇ ಲಖಿಂಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News