ಎನ್‌ಡಿಎಗೆ ಭಾರೀ ಗೆಲುವು | ಬಿಹಾರ ಹೂಕೋಸು ಕೃಷಿಯನ್ನು ಅನುಮೋದಿಸಿದೆ: ಆಘಾತಕಾರಿ ಹೇಳಿಕೆ ನೀಡಿದ ಅಸ್ಸಾಂ ಸಚಿವ
1989ರಲ್ಲಿ ಬಿಹಾರದ ಭಾಗಲ್ಪುರದ ಕೋಮು ಗಲಭೆ ʼಲೋಗಾಯಿನ್ ಹತ್ಯಾಕಾಂಡʼ ನೆನಪಿಸಿದ ಸಚಿವ!
ಬಿಜೆಪಿ ಸಚಿವ ಅಶೋಕ ಸಿಂಘಾಲ್ | Photo Credit : @TheAshokSinghal
ಗುವಾಹಟಿ,ನ.14: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವಿನ ಬಳಿಕ ಅಸ್ಸಾಮಿನ ಬಿಜೆಪಿ ಸಚಿವ ಅಶೋಕ ಸಿಂಘಾಲ್ ಅವರು ಎಕ್ಸ್‌ನಲ್ಲಿ ಹೂಕೋಸುಗಳ ಚಿತ್ರವನ್ನು ‘ಬಿಹಾರವು ಹೂಕೋಸು ಕೃಷಿಯನ್ನು ಅನುಮೋದಿಸಿದೆ ’ ಎಂಬ ಅಡಿಬರಹದೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರವು 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದ ಕೋಮು ಗಲಭೆಗಳ ಕುಖ್ಯಾತ ‘ಹೂಕೋಸು ಸಮಾಧಿ ಪ್ರಕರಣ’ ಅಥವಾ ಲೋಗಾಯಿನ್ ಹತ್ಯಾಕಾಂಡವನ್ನು ಉಲ್ಲೇಖಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವಿಸಿದ್ದಾರೆ.
Bihar approves Gobi farming ✅ pic.twitter.com/SubrTQ0Mu5
— Ashok Singhal (@TheAshokSinghal) November 14, 2025
ಗಲಭೆಗಳಲ್ಲಿ 1,000ಕ್ಕೂ ಅಧಿಕ ಮುಸ್ಲಿಮರು ಕೊಲ್ಲಲ್ಪಟ್ಟಿದ್ದು, ಸಾಕ್ಷ್ಯಾಧಾರವನ್ನು ಬಚ್ಚಿಡಲು ಅವರ ಮೃತದೇಹಗಳನ್ನು ಹೊಲವೊಂದರಲ್ಲಿ ಹೂತು ಅವುಗಳ ಮೇಲೆ ಹೂಕೋಸು ಸಸಿಗಳನ್ನು ನೆಡಲಾಗಿತ್ತು.
ಆಗಿನಿಂದ ಲೋಗಾಯಿನ್ ಹತ್ಯಾಕಾಂಡವನ್ನು ನೆನಪಿಸಲು ಹೂಕೋಸುಗಳ ಚಿತ್ರಗಳನ್ನು ಬಳಸಲಾಗುತ್ತಿದೆ. ಇತ್ತೀಚಿಗೆ ಮಾರ್ಚ್ 2025ರಲ್ಲಿ ಮಹಾರಾಷ್ಟ್ರದ ನಾಗ್ಪುರ ಹಿಂಸಾಚಾರದ ನಡುವೆ ಕೆಲವು ಬಲಪಂಥೀಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಹೂಕೋಸುಗಳ ಚಿತ್ರಗಳನ್ನು ಹಂಚಿಕೊಂಡಿದ್ದವು. ಕರ್ನಾಟಕ ಬಿಜೆಪಿಯ ಅಧಿಕೃತ ಖಾತೆಯು ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ಹತ್ಯೆಗಳನ್ನು ಸಂಭ್ರಮಿಸಿ ಮೀಮ್ ವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಹೂಕೋಸುಗಳ ಉಲ್ಲೇಖವನ್ನೂ ಹೊಂದಿತ್ತು.
ಅಸ್ಸಾಂ ಸಚಿವರ ಪೋಸ್ಟ್ ಕ್ರೂರ ಹತ್ಯಾಕಾಂಡದ ನಿಖರ ಉಲ್ಲೇಖದ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಅಪನಂಬಿಕೆಯನ್ನು ಹುಟ್ಟುಹಾಕಿದೆ.
ಅಸ್ಸಾಮಿನ ಬಿಜೆಪಿ ಸಚಿವರು ಪೋಸ್ಟ್ ಮಾಡಿರುವ ಹೂಕೋಸು ಗದ್ದೆಯ ಚಿತ್ರವನ್ನು 1989ರಲ್ಲಿ ಭಾಗಲ್ಪುರದಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ವೈಭವೀಕರಿಸಲು ಹಿಂದು ಉಗ್ರವಾದಿಗಳು ಬಳಸಿದ್ದರು,ಪುರಾವೆಗಳನ್ನು ಮರೆಮಾಚಲು ಸಮಾಧಿ ಸ್ಥಳದಲ್ಲಿ ಹೂಕೋಸು ಸಸಿಗಳನ್ನು ನೆಡಲಾಗಿತ್ತು ಎಂದು ಓರ್ವ ಬಳಕೆದಾರರು ಬರೆದಿದ್ದಾರೆ.
ಅಸ್ಸಾಮಿನ ಸಂಪುಟ ಸಚಿವರು ಈ ಪೋಸ್ಟ್ ಮಾಡಿರುವ ಸಾಧ್ಯತೆಯಿಲ್ಲ ಎಂದು ಓರ್ವ ಬಳಕೆದಾರರು ಹೇಳಿದ್ದರೆ, ಹಾಗಿದ್ದರೆ ಇದು ಸಚಿವರ ಅಧಿಕೃತ ಹ್ಯಾಂಡಲ್ ಅಲ್ಲವೇ ಎಂದು ಇನ್ನೋರ್ವರು ಪ್ರಶ್ನಿಸಿದ್ದಾರೆ. ‘ಏನು? ನಿಜಕ್ಕೂ? ನಾನು ಇದು ವಿಡಂಬನಾತ್ಮಕ ಖಾತೆ ’ಎಂದು ಭಾವಿಸಿದ್ದೆ ಎಂದು ಮಗದೋರ್ವರು ಬರೆದಿದ್ದಾರೆ.
►ಲೋಗಾಯಿನ್ ನಲ್ಲಿ ಏನಾಗಿತ್ತು?
24,ಅಕ್ಟೋಬರ್ 1989ರಂದು ಆರಂಭವಾಗಿದ್ದ ಹಿಂಸಾಚಾರವು ಎರಡು ತಿಂಗಳುಗಳ ಕಾಲ ಮುಂದುವರಿದಿತ್ತು ಮತ್ತು ಭಾಗಲ್ಪುರ ನಗರ ಹಾಗೂ ಸುತ್ತುಮುತ್ತಲಿನ 250 ಗ್ರಾಮಗಳಲ್ಲಿ ವ್ಯಾಪಿಸಿತ್ತು. 1,000ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಅವರಲ್ಲಿ ಸುಮಾರು 900 ಜನರು ಮುಸ್ಲಿಮರಾಗಿದ್ದರು. 50,000 ಜನರು ಸ್ಥಳಾಂತರಗೊಂಡಿದ್ದರು. ಅದು ಆ ಸಮಯದಲ್ಲಿ ಸ್ವತಂತ್ರ ಭಾರತದಲ್ಲಿ ಹಿಂದು-ಮುಸ್ಲಿಮ್ ಹಿಂಸಾಚಾರದ ಅತ್ಯಂತ ಭೀಕರ ಘಟನೆಯಾಗಿತ್ತು.
ಲೋಗಾಯಿನ್ ಗ್ರಾಮದಲ್ಲಿ ಎಎಸ್‌ಐ ರಾಮಚಂದ್ರ ಸಿಂಗ್ ನೇತೃತ್ವದ 4,000 ಜನರ ಗುಂಪು 116 ಮುಸ್ಲಿಮರನ್ನು ಕೊಂದಿತ್ತು. ಅವರ ಮೃತದೇಹಗಳನ್ನು ಹೂತ ಬಳಿಕ ಆ ಸಾವುಗಳನ್ನು ಮರೆ ಮಾಡಲು ಹೂಕೋಸು ಮತ್ತು ಎಲೆಕೋಸು ಸಸಿಗಳನ್ನು ನೆಡಲಾಗಿತ್ತು.
ಈ ಹತ್ಯೆಗಳಿಗಾಗಿ ಮಾಜಿ ಪೋಲಿಸ್ ಅಧಿಕಾರಿ ಸೇರಿದಂತೆ 14 ಜನರಿಗೆ 2007ರಲ್ಲಿ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.