×
Ad

ಅಸ್ಸಾಂ | ದೇಗುಲಗಳಿಗೆ ಸಂಭಾವ್ಯ ಹಾನಿ ಸಂಚು; ಧುಬ್ರಿಯಲ್ಲಿ ಕಂಡಲ್ಲಿ ಗುಂಡಿಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಆದೇಶ

Update: 2025-06-14 09:57 IST

PC: screengrab/x.com

ಗುವಾಹತಿ: "ನಮ್ಮ ದೇಗುಲಗಳನ್ನು ಹಾನಿಪಡಿಸುವ ಉದ್ದೇಶದಿಂದ ಕೆಲ ಗುಂಪುಗಳು ಸಕ್ರಿಯವಾಗಿವೆ" ಎಂಬ ಕಾರಣ ನೀಡಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಶುಕ್ರವಾರ ರಾಜ್ಯದ ಧುಬ್ರಿ ಜಿಲ್ಲೆಯಲ್ಲಿ ಕಂಡಲ್ಲಿ ಗುಂಡು ಹಾರಿಸುವ ಆದೇಶ ನೀಡಿದ್ದಾರೆ.

"ಧುಬ್ರಿಯಲ್ಲಿ ನಿರ್ದಿಷ್ಟ ಗುಂಪು ನಮ್ಮ ದೇವಾಲಯಗಳನ್ನು ಹಾಳು ಮಾಡುವ ಉದ್ದೇಶದಿಂದ ಸಕ್ರಿಯವಾಗಿದೆ. ನಾವು ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ನೀಡಿದ್ದೇವೆ" ಎಂದು ಶರ್ಮಾ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಪರಿಸ್ಥಿತಿ ಅವಲೋಕನಕ್ಕಾಗಿ ಗಲಭೆಪೀಡಿತ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದು, ಅಗತ್ಯ ಬಿದ್ದಲ್ಲಿ ಮತ್ತೆ ಭೇಟಿ ನೀಡುವುದಾಗಿ ಮತ್ತೊಂದು ಪೋಸ್ಟ್ನಲ್ಲಿ ವಿವರಿಸಿದ್ದಾರೆ. "ಅಸ್ಸಾಂ ಸರ್ಕಾರ ನಿಮ್ಮೊಂದಿಗೆ ಇದೆ" ಎಂದು ಧುಬ್ರಿ ನಿವಾಸಿಗಳಿಗೆ ಶರ್ಮಾ ಭರವಸೆ ನೀಡಿದ್ದಾರೆ. ಜತೆಗೆ ಸ್ಥಳೀಯರ ಸುರಕ್ಷತೆಯ ಆಶ್ವಾಸನೆಯನ್ನೂ ನೀಡಿದ್ದಾರೆ.

"ಧುಬ್ರಿಯ ಜನತೆ ಭೀತಿಯ ನೆರಳಲ್ಲಿ ಬದುಕುವ ಅಗತ್ಯವಿಲ್ಲ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದೇನೆ" ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ.

ಈದ್ ಹಬ್ಬದ ಸಂದರ್ಭದಲ್ಲಿ ಹನುಮಾನ್ ಮಂದಿರಕ್ಕೆ ಗೋಮಾಂಸ ಎಸೆಯಲಾಗಿದೆ ಎಂಬ ವದಂತಿ ಬಳಿಕ ಧುಬ್ರಿ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸಿಎಂ ಭೇಟಿ ನೀಡಿದ್ದರು.

ದೇಗುಲ ಮಂದಿರ ಮತ್ತು ಪವಿತ್ರ ಸ್ಥಳಗಳನ್ನು ವಿರೂಪಗೊಳಿಸುವ ಯಾವುದೇ ಶಕ್ತಿಗಳ ವಿರುದ್ಧ ಕಾನೂನು ಜಾರಿ ವ್ಯವಸ್ಥೆ "ಶೂನ್ಯ ಸಹಿಷ್ಣುತೆ" ಕ್ರಮ ಅನುಸರಿಸಲಿದೆ. ಇಂಥ ಘಟನೆಗಳಲ್ಲಿ ಷಾಮೀಲಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಗರದ ಹನುಮಾನ್ ಮಂದಿರಕ್ಕೆ ಗೋಮಾಂಸ ಎಸೆಯುವಂಥ ಘಟನೆ ಎಂದಿಗೂ ನಡೆಯಬಾರದಿತ್ತು ಮತ್ತು ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News