×
Ad

ವಿವಾಹ ಪ್ರಸ್ತಾವ ತಿರಸ್ಕರಿಸಿದ್ದಕ್ಕಾಗಿ ಮಹಿಳೆಯ ಕತ್ತು ಸೀಳಿ ಕೊಲೆ ಯತ್ನ: ಆರೋಪಿಯ ಬಂಧನ

Update: 2023-11-29 22:22 IST

ಸಾಂದರ್ಭಿಕ ಚಿತ್ರ  

ಹೊಸದಿಲ್ಲಿ: ತನ್ನ ವಿವಾಹ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕಾಗಿ ಭಗ್ನಪ್ರೇಮಿಯೊಬ್ಬ 25 ವರ್ಷದ ಮಹಿಳೆಯನ್ನು ಬ್ಲೇಡಿನಿಂದ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಕಾಲಾಚೌಕಿ ಪ್ರದೇಶದಲ್ಲಿರುವ ಮಹಿಳೆಯ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಆರೋಪಿ 44 ವರ್ಷ ವಯಸ್ಸಿನವಾಗಿದ್ದು, ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಕಾಲಾಚೌಕ್ ಪ್ರದೇಶದ ಪರಶುರಾಮ ನಗರದ ನಿವಾಸಿಯಾದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಅದೇ ಪ್ರದೇಶದ ನಿವಾಸಿಯೆಂದು ತಿಳಿದುಬಂದಿದೆ. ಆಕೆ ಕಳೆದ ಒಂದು ವರ್ಷದಿಂದ ಆರೋಪಿಯ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಳು ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಗೆ ಆಕೆಯನ್ನು ವಿವಾಹವಾಗಲು ಬಯಸಿದ್ದ. ಆದರೆ ಆತನ ಪ್ರಸ್ತಾವನೆಯನ್ನು ಆಕೆ ತಿರಸ್ಕರಿಸಿದ್ದಳೆನ್ನಲಾಗಿದೆ.

ಸೋಮವಾರ ರಾತ್ರಿ ಈ ಬಗ್ಗೆ ಇವರಿಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಆಗ ಮಹಿಳೆಯು ಕೆಲವರ ಎದುರೇ ಆತನನ್ನು ಅವಮಾನಿಸಿದ್ದಳು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಆರೋಪಿಯು ಮಹಿಳೆಯ ಮನೆಗೆ ನುಗ್ಗಿ, ಆಕೆಯನ್ನು ಕುತ್ತಿಗೆಯನ್ನು ಬ್ಲೇಡ್ ನಿಂದ ಸೀಳಿ, ಕೊಲೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News