×
Ad

ಔರಂಗಜೇಬ್ ಸಮಾಧಿ ವಿವಾದ: ಮಾರ್ಚ್ 16ರಿಂದ ಎಪ್ರಿಲ್ 5ರವರೆಗೆ ಛತ್ರಪತಿ ಸಂಭಾಜಿನಗರ ಪ್ರವೇಶಿಸದಂತೆ ಹಿಂದುತ್ವ ನಾಯಕ ಏಕ್ಬೋಟೆಗೆ ನಿಷೇಧ

Update: 2025-03-15 21:22 IST

PC :deccanherald.com

ಛತ್ರಪತಿ ಸಂಭಾಜಿನಗರ: ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್ ನಲ್ಲಿರುವ ಮುಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಕೆಲವು ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ, ಮಾರ್ಚ್ 16ರಿಂದ ಎಪ್ರಿಲ್ 5ರವರೆಗೆ ಛತ್ರಪತಿ ಸಂಭಾಜಿನಗರವನ್ನು ಪ್ರವೇಶಿಸದಂತೆ ಹಿಂದುತ್ವ ನಾಯಕ ಮಿಲಿಂದ್ ಏಕ್ಬೋಟೆಗೆ ನಿಷೇಧ ಹೇರಲಾಗಿದೆ.

ಶನಿವಾರ ಈ ಆದೇಶವನ್ನು ಹೊರಡಿಸಿರುವ ಸ್ಥಾನಿಕ ಉಪ ಜಿಲ್ಲಾಧಿಕಾರಿಗಳು, ಏಕ್ಬೋಟೆಯ ಧರ್ಮವೀರ್ ಸಂಭಾಜಿ ಮಹಾರಾಜ್ ಪ್ರತಿಷ್ಠಾನವು ಪ್ರತಿ ವರ್ಷ ಪುಣೆಯಲ್ಲಿ ಸಂಭಾಜಿ ಮಹಾರಾಜರಿಗೆ ಗೌರವ ನಮನ ಸಲ್ಲಿಸುತ್ತಾ ಬರುತ್ತಿದ್ದು, ಈ ಬಾರಿ ಔರಂಗಜೇಬ್‌ ಸಮಾಧಿಯನ್ನು ನೆಲಸಮಗೊಳಿಸಲು ಮಿಲಿಂದ್ ಏಕ್ಬೋಟೆ ಹಾಗೂ ಅವರ ಬೆಂಬಲಿಗರು ಛತ್ರಪತಿ ಸಂಭಾಜಿನಗರ ಜಿಲ್ಲೆಗೆ ಬರುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.

‘ಛಾವಾ’ ಚಿತ್ರದ ಬಿಡುಗಡೆಯ ನಂತರ, ಔರಂಗಜೇಬ್‌ ಸಮಾಧಿಯ ಕುರಿತ ಹಲವರ ದೃಷ್ಟಿಕೋನವು ಅತಿರೇಕಕ್ಕೆ ತಲುಪಿದ್ದು, ಅದನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಕಾಣಬಹುದಾಗಿದೆ ಎಂದು ಜಿಲ್ಲಾಡಳಿತ ತನ್ನ ಆದೇಶದಲ್ಲಿ ಹೇಳಿದೆ.

ಔರಂಗಜೇಬ್‌ ಸಮಾಧಿಯನ್ನು ನೆಲಸಮಗೊಳಿಸಲು ಆಗ್ರಹಿಸಿ ಮಾರ್ಚ್ 17ರಿಂದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳಗಳು ಪ್ರತಿಭಟನೆಗಳನ್ನು ನಡೆಸಲು ಯೋಜಿಸಿವೆ ಎಂದೂ ಆದೇಶದಲ್ಲಿ ಹೇಳಲಾಗಿದೆ.

“ಹೀಗಾಗಿ ಮಾರ್ಚ್ 17ರಿಂದ ಎಪ್ರಿಲ್ ವರೆಗೆ ಮಿಲಿಂದ್ ಏಕ್ಬೋಟೆ ಹಾಗೂ ಬೆಂಬಲಿಗರು ಛತ್ರಪತಿ ಸಂಭಾಜಿನಗರವನ್ನು ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನವರಿ 1, 2018ರಲ್ಲಿ ಪುಣೆ ಜಿಲ್ಲೆಯ ಕೋರೆಗಾಂವ್ ಭೀಮಾದಲ್ಲಿ ಜಾತಿ ಗಲಭೆಗಳಿಗೆ ಪ್ರಚೋದನೆ ನೀಡಿದ್ದ ಆರೋಪವನ್ನು ಮಿಲಿಂದ್ ಏಕ್ಬೋಟೆ ಎದುರಿಸುತ್ತಿದ್ದಾರೆ. 1659ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಂದ ಹತ್ಯೆಗೊಳಗಾಗಿದ್ದ ಬಿಜಾಪುರ ದಂಡನಾಯಕ ಅಫ್ಝಲ್ ಖಾನ್ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ನಡೆದಿದ್ದ ಹೋರಾಟದಲ್ಲೂ ಏಕ್ಬೋಟೆ ಪಾಲ್ಗೊಂಡಿದ್ದರು. ಈ ಸಮಾಧಿ ಸತಾರಾದ ಪ್ರತಾಪ್ ಗಢದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News