×
Ad

ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಪ್ರಯಾಣಿಸುವ ಆ್ಯಕ್ಸಿಯೊಮ್-4 ಮಿಶನ್ ಜೂ.19ರಂದು ಉಡಾವಣೆ

Update: 2025-06-14 21:49 IST

PC : @airnewsalerts

ಹೊಸದಿಲ್ಲಿ: ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರ ಮೂವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯಲಿರುವ ಆ್ಯಕ್ಸಿಯೊಮ್-4 ಗಗನಯಾನ ಮಿಶನ್ ಜೂನ್ 19ರಂದು ಉಡಾವಣೆಗೊಳ್ಳಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಶನಿವಾರ ಘೋಷಿಸಿದೆ.

ಆ್ಯಕ್ಸಿಯೊಮ್ ಬಾಹ್ಯಾಕಾಶ ಮಿಶನ್ ಜೂನ್ 11ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಆ್ಯಕ್ಸಿಯೊಮ್ ನೌಕೆಯನ್ನು ಅಂತರಿಕ್ಷಕ್ಕೆ ಒಯ್ಯುವ ಸ್ಪೇಸ್‌ಎಕ್ಸ್‌ನ ಫಾಲ್ಕನ್‌9 ರಾಕೆಟ್‌ನಲ್ಲಿ ಇಂಧನ ಸೋರಿಕೆ ಕಂಡುಬಂದಿದ್ದರಿಂದ ಉಡಾವಣೆಯನ್ನು ಮುಂದೂಡಲಾಗಿತ್ತು. ಆನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರಶ್ಯನ್ ವಿಭಾಗದಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಉಡಾವಣೆಯನ್ನು ಇನ್ನಷ್ಟು ವಿಳಂಬಿಸಲಾಗಿತ್ತು.

ಇಸ್ರೋ, ಆ್ಯಕ್ಸಿಯೊಮ್ ಸ್ಪೇಸ್ ಹಾಗೂ ಸ್ಪೇಸ್ ಎಕ್ಸ್ ನಡುವೆ ಸಮನ್ವಯ ಸಭೆ ನಡೆದ ಬಳಿಕ ಉಡಾವಣಾ ವಾಹನ ಫಾಲ್ಕನ್‌9ರಲ್ಲಿ ಕಂಡುಬಂದಿರುವ ದ್ರವ ಆಮ್ಲಜನಕದ ಸೋರಿಕೆಯ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ’’ ಎಂದು ಇಸ್ರೋ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರತ್ಯೇಕವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಝ್ವೆಝ್ಡಾ ಸರ್ವೀಸ್ ಮೊಡ್ಯೂಲ್‌ನಲ್ಲಿನ ಒತ್ತಡದ ಅಸಮಂಜಸತೆಯನ್ನು ಅಂದಾಜಿಸುವ ನಿಟ್ಟಿನಲ್ಲಿ ತಾವು ನಾಸಾದೊಂದಿಗೆ ನಿಕಟವಾಗಿ ಶ್ರಮಿಸುತ್ತಿರುವುದಾಗಿ ಇಸ್ರೋ ತಿಳಿಸಿದೆ.

ಇದೀಗ 2025ರ ಜೂನ್ 19ರಂದು ಆಕ್ಸಿಯೊಮ್ 4 ಮಿಶನ್ ಅನ್ನು ಉಡಾವಣೆಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆಯೆಂದು ಇಸ್ರೋ ಹೇಳಿಕೆ ತಿಳಿಸಿದೆ.

ಮೂಲತಃ ಆ್ಯಕ್ಸಿಯೊಮ್ 4 ಮಿಶನ್ ಮೇ 29ರಂದು ಉಡಾವಣೆಗೊಳ್ಳಲಿತ್ತು. ಫಾಲ್ಕನ್-9 ರಾಕೆಟ್‌ನಲ್ಲಿ ದ್ರವ ಆಮ್ಲಜನಕದ ಸೋರಿಕೆ ಪತ್ತೆಯಾದ ಆನಂತರ ಉಡಾವಣಾ ದಿನಾಂಕವನ್ನು ಜೂನ್‌8,ಜೂನ್ 10 ಹಾಗೂ ಜೂನ್ 11ಕ್ಕೆ ಮುಂದೂಡುತ್ತಲೇ ಹೋಗಲಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News