×
Ad

ಅಯೋಧ್ಯೆಯಲ್ಲಿ ದಲಿತ ಯುವತಿಯ ಭೀಕರ ಹತ್ಯೆ

Update: 2025-02-02 20:30 IST

   ಸಾಂದರ್ಭಿಕ ಚಿತ್ರ 

ಲಕ್ನೋ:ಅಯೋಧ್ಯೆಯ ಸಹ್ನಾವಾ ಗ್ರಾಮದ ಹೊರವಲಯದಲ್ಲಿ ದಲಿತ ಯುವತಿಯೊಬ್ಬಳ ವಿವಸ್ತ್ರಗೊಂಡ ಮೃತದೇಹ ಪತ್ತೆಯಾಗಿದ್ದು, ಆಕೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ.

22 ವರ್ಷ ವಯಸ್ಸಿನ ಈ ದಲಿತ ಯುವತಿ ನಿಗೂಢವಾಗಿ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದಳು. ಆಕೆಯ ವಿವಸ್ತ್ರಗೊಂಡ ಮೃತದೇಹವು ಗ್ರಾಮದ ಹೊರವಲಯದಲ್ಲಿರುವ ಚರಂಡಿಯೊಂದರಲ್ಲಿ ನಿವಾರ ಪತ್ತೆಯಾಗಿತ್ತು. ಮೃತದೇಹದ ಕಾಲುಗಳು ಮುರಿದಿದ್ದು, ಕಣ್ಣುಗಳನ್ನು ಕಿತ್ತುಹಾಕಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವೆಂದು ಸಂತ್ರಸ್ತೆಯ ಕುಟುಂಬಿಕರು ಹಾಗೂ ಗ್ರಾಮಸ್ಥರು ಶಂಕಿಸಿದ್ದಾರೆ.

ನಾಪತ್ತೆಯಾದ ಯುವತಿಯ ಬಗ್ಗೆ ಯಾವುದೇ ಸುಳಿವು ದೊರೆಯದ ಆನಂತರ ಕುಟುಂಬಿಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ರಾತ್ರಿ ಪೊಲೀಸರು, ಗುರುತಿಸಲ್ಪಡದ ವ್ಯಕ್ತಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು.

ಆನಂತರ ಸಂತ್ರಸ್ತ ಯುವತಿಯ ಮೃತದೇಹವು ನಗ್ನಸ್ಥಿತಿಯಲ್ಲಿ ಗ್ರಾಮದ ಹೊರವಲಯದಲ್ಲಿರುವ ಚರಂಡಿಯಲ್ಲಿ ಬಿದ್ದಿರುವುದನ್ನು ಆಕೆಯ ಹಿರಿಯ ಸಹೋದರಿಯ ಪತಿ ಪತ್ತೆ ಹಚ್ಚಿದ್ದರು.

ಇದೊಂದು ಕೊಲೆ ಪ್ರಕರಣವೆಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಂದಿನ ತನಿಖೆ ನಡೆಯುತ್ತಿರುವುದಾಗಿ ಕೋಟ್ವಾಲಿ ಪೊಲೀಸ್ ಠಾಣಾ ಉಸ್ತುವಾರಿ ಮನೋಜ್ ಶರ್ಮಾ ತಿಳಿಸಿದ್ದಾರೆ.

ಯುವತಿಯು ಗ್ರಾಮದಲ್ಲಿ ನಡೆಯುತ್ತಿದ್ದ ಧಾರ್ಮಿಕ ‘ಕಥಾ ಪ್ರವಚನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ತೆರಳಿದ್ದಳು ಎಂದು ಸಂತ್ರಸ್ತೆಯ ಹಿರಿಯ ಸಹೋದರಿ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಅತ್ಯಾಚಾರದ ಆರೋಪವನ್ನು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ದೃಢಪಡಿಸಲಾಗುವುದೆಂದು ಸ್ಥಳೀಯ ವೃತ್ತ ಪೊಲೀಸ್ ನಿರೀಕ್ಷಕ ಅಶುತೋಷ್‌ತಿವಾರಿ ಹೇಳಿದ್ದಾರೆ. ಗ್ರಾಮಸ್ಥರನ್ನು ಪ್ರಶ್ನಿಸಲು ತಂಡಗಳನ್ನು ರಚಿಸಲಾಗಿದೆಯೆಂದವರು ಹೇಳಿದ್ದಾರೆ.

ಈ ಮಧ್ಯೆ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕ ತೇಜ್ ನಾರಾಯಣ್ ಪಾಂಡೆ ಸಂತ್ರಸ್ತ ಯುವತಿಯ ಕುಟುಂಬಿಕರನ್ನು ಭೇಟಿಯಾಗಿ ಅವರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News