ಮಾಜಿ ಕ್ರಿಕೆಟಿಗ ಅಝರುದ್ದೀನ್ ಪುತ್ರ ರಾಜಕೀಯಕ್ಕೆ : ತೆಲಂಗಾಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
Photo | X/@azharflicks
ಹೈದರಾಬಾದ್: ಮಾಜಿ ಕ್ರಿಕೆಟಿಗ, ಮಾಜಿ ಸಂಸದ ಮಹಮ್ಮದ್ ಅಝರುದ್ದೀನ್ ಪುತ್ರ ಮುಹಮ್ಮದ್ ಅಸಾದುದ್ದೀನ್ ಅವರನ್ನು ಕಾಂಗ್ರೆಸ್ ಪಕ್ಷದ ತೆಲಂಗಾಣ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಮೊದಲು ಕ್ರಿಕೆಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಅಸಾದುದ್ದೀನ್ ತಂದೆಯಂತೆಯೇ ಬಳಿಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನೇಮಕ ಮಾಡಿದ್ದ 69 ಪ್ರಧಾನ ಕಾರ್ಯದರ್ಶಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಸಂಸದ ಮುಹಮ್ಮದ್ ಅಝರುದ್ದೀನ್ ಪುತ್ರ ಮುಹಮ್ಮದ್ ಅಸಾದುದ್ದೀನ್ ಸೇರಿದ್ದಾರೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್ ಕ್ಷೇತ್ರದ ಶಾಸಕ ಮಗಂತಿ ಗೋಪಿನಾಥ್ ನಿಧನದಿಂದ ತೆರವಾದ ಸ್ಥಾನಕ್ಕೆ ಅಸಾದುದ್ದೀನ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದೆಂಬ ಚರ್ಚೆ ಮಧ್ಯೆ ಈ ಬೆಳವಣಿಗೆ ನಡೆದಿದೆ.
"ಮುಂದೆ ಏನಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ತಂದೆ ಇನ್ನೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನೋಡೋಣʼ ಎಂದು ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ಅಸಾದುದ್ದೀನ್ ಹೇಳಿದ್ದಾರೆ.
2023ರ ಚುನಾವಣೆಯ ನಂತರ ಕಾಂಗ್ರೆಸ್ ಜೊತೆ ನಿಕಟವಾಗಿ ತೊಡಗಿಸಿಕೊಂಡಿರುವ ಅಸಾದುದ್ದೀನ್, ತಂದೆಯ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಕ್ಷೇತ್ರದಾದ್ಯಂತ ರ್ಯಾಲಿಗಳು, ಸಭೆಗಳನ್ನು ನಡೆಸಿದ್ದರು.
ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆಯುವ ಮೊದಲು, ಅಸಾದುದ್ದೀನ್ ತೆಲಂಗಾಣದಲ್ಲಿ ಕಾಂಗ್ರೆಸ್ ಯುವ ಘಟಕದ ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಅಸಾದುದ್ದೀನ್ ಕಾನೂನು ಪದವೀಧರನಾಗಿದ್ದು, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅವರನ್ನು ವಿವಾಹವಾಗಿದ್ದಾರೆ.