×
Ad

ಬದ್ಲಾಪುರ್ ಎನ್‌ಕೌಂಟರ್ ಪ್ರಕರಣ: ಐವರು ಪೊಲೀಸ್ ಅಧಿಕಾರಗಳ ವಿರುದ್ಧ ಎಫ್‌ಐಆರ್ ದಾಖಲಿಸದ ಎಸ್‌ಐಟಿಗೆ ಬಾಂಬೆ ಹೈಕೋರ್ಟ್ ತರಾಟೆ

Update: 2025-04-30 20:16 IST

 ಬಾಂಬೆ ಹೈಕೋರ್ಟ್ | PC : PTI 

ಮುಂಬೈ: ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯನ್ನು ಎನ್‌ಕೌಂಟರ್‌ ನಲ್ಲಿ ಹತ್ಯೆಗೈದ ಆರೋಪ ಎದುರಿಸುತ್ತಿರುವ ಐದು ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಈವರೆಗೆ ಎಫ್‌ಐಅರ್ ದಾಖಲಿಸಿಕೊಳ್ಳದ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ವಿಶೇಷ ತನಿಖಾ ತಂಡವನ್ನು ಬುಧವಾರ ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್, ಇದು ತುಂಬಾ ವಿಷಾದಕರ ಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆಯನ್ನೂ ನೀಡಿತು. ಆಗ ಮಧ್ಯಪ್ರವೇಶಿಸಿದ ಮುಂಬೈ ಪೊಲೀಸ್ ಇಲಾಖೆ ಪರ ವಕೀಲ ವೆನೆಗಾಂವ್ಕರ್, ಮೇ 3(ಶನಿವಾರ)ರೊಳಗೆ ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಮುಂಬೈ ಪೊಲೀಸ್ ಇಲಾಖೆ ಪರ ವಕೀಲ ವೆನೆಗಾಂವ್ಕರ್ ನೀಡಿದ ಭರವಸೆಯನ್ನು ನ್ಯಾ. ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ನೀಲಾ ಗೋಖಲೆ ಅವರನ್ನೊಳಗೊಂಡಿದ್ದ ನ್ಯಾಯಪೀಠ ಒಪ್ಪಿಕೊಂಡಿತು.

ಪುಣೆ ಜಿಲ್ಲೆಯ ಬದ್ಲಾಪುರ್‌ ನಲ್ಲಿರುವ ಕಿಂಡರ್ ಗಾರ್ಟನ್‌ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಅಕ್ಷಯ್ ಶಿಂದೆ(24)ಯನ್ನು ಸೆಪ್ಟೆಂಬರ್ 23, 2024ರಂದು ಪೊಲೀಸ್ ವ್ಯಾನ್‌ನಲ್ಲಿ ಗುಂಡಿಟ್ಟ ಎನ್‌ಕೌಂಟರ್ ಮಾಡಲಾಗಿತ್ತು. ಈ ಸಂಬಂಧ, ಅಕ್ಷಯ್ ಶಿಂದೆ ಸಾವಿನ ಕುರಿತು ಸಲ್ಲಿಕೆಯಾಗಿದ್ದ ಮ್ಯಾಜಿಸ್ಟ್ರೇಟ್ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿರುವ ಐವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಎಪ್ರಿಲ್ 7ರಂದು ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತೆ ಲಕ್ಷ್ಮಿ ಗೌತಮ್ ಅವರಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News