ಬಜರಂಗದಳ ಮುಖಂಡನಿಂದ ಪೊಲೀಸರ ಸಮ್ಮುಖದಲ್ಲೇ ಅತ್ಯಾಚಾರದ ಬೆದರಿಕೆ!
Photo : madhyamamonline
ರಾಯಪುರ,ಆ.3: ಬಜರಂಗದಳ ನಾಯಕ ಜ್ಯೋತಿ ಶರ್ಮಾನ ಸೂಚನೆಯಂತೆ ಸ್ಥಳೀಯ ಪೊಲೀಸರು ತಮಗೆ ಕಸ್ಟಡಿಯಲ್ಲಿ ಥಳಿಸಿದ್ದಾರೆಂದು ಮತಾಂತರದ ಆರೋಪದಲ್ಲಿ ಚತ್ತೀಸ್ ಗಡದಲ್ಲಿ ಬಂಧಿತರಾದ ಕೇರಳದ ಕ್ರೈಸ್ತ ಭಗಿನಿಯರ ಜೊತೆಗಿದ್ದ ಬುಡಕಟ್ಟು ಯುವತಿಯರು ರವಿವಾರ ಆಪಾದಿಸಿದ್ದಾರೆ.
ಕ್ರೈಸ್ತ ಭಗಿನಿಯರಿಬ್ಬರು ಜಾಮೀನು ಬಿಡುಗಡೆಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜ್ಯೋತಿ ಶರ್ಮಾನ ಸೂಚನೆಯಂತೆ ಪೊಲೀಸರು ತಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರಿಂದ ಅತ್ಯಾಚಾರಗೊಳಿಸುವುದಾಗಿ ಜ್ಯೋತಿಶರ್ಮಾ ಪೊಲೀಸರ ಸಮ್ಮುಖದಲ್ಲೇ ತಮಗೆ ಬೆದರಿಕೆಯೊಡ್ಡಿದ್ದನೆಂದು ಅವರು ಆಪಾದಿಸಿದ್ದಾರೆ.
ಸುದ್ದಿಗಾರರ ಮುಂದೆ ಕಣ್ಣೀರು ಸುರಿಸುತ್ತಾ ನಡೆದ ಘಟನೆಯನ್ನು ವಿವರಿಸಿದ ಈ ಯುವತಿಯರು ಯಾವುದೇ ಮತಾಂತರ ಅಥವಾ ಮಾನವಕಳ್ಳಸಾಗಣೆಯ ಪ್ರಯತ್ನವಾಗಲಿ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಿಂಸಾಚಾರ ಹಾಗೂ ದೌರ್ಜನ್ಯವೆಸಗಲು ಕುಮ್ಮಕ್ಕು ನೀಡುತ್ತಿರುವ ಜ್ಯೋತಿ ಶರ್ಮಾನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಜ್ಯೋತಿ ಶರ್ಮಾ ಮತ್ತಿತರರ ವಿರುದ್ಧ ಶನಿವಾರ ನಾರಾಯಣಪುರ ಪೊಲೀಸ್ಠಾಣೆಯಲ್ಲಿ ತಾವು ದೂರು ದಾಖಲಿಸಿದ್ದರೂ, ಅಲ್ಲಿನ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದುದರಿಂದ ತಾವು ದುರ್ಗ್ ಪೊಲೀಸ್ ಠಾಣೆಗೆ ಆನ್ಲೈನ್ ನಲ್ಲಿ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
ಜಾರ್ಖಂಡ್ ನ ಮೂವರು ಬುಡಕಟ್ಟು ಯುವತಿಯರ ಜೊತೆ ಪ್ರಯಾಣಿಸುತ್ತಿದ್ದ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರಾದ ವಂದನಾ ಫ್ರಾನ್ಸಿಸ್, ಸಿಸ್ಟರ್ ಪ್ರೀತಿ ಜೊತೆ ಸುಖಮಾನ್ ಮಾಂಡವಿ ಎಂಬವರನ್ನು ಚತ್ತೀಸ್ಗಡ ಪೊಲೀಸರು ಮತಾಂತರ ಹಾಗೂ ಮಾನವ ಕಳ್ಳಸಾಗಣೆಯ ಆರೋಪದಲ್ಲಿ ಕಳೆದ ವಾರ ಬಂಧಿಸಿದ್ದರು ಹಾಗೂ ಬುಡಕಟ್ಟು ಯುವತಿಯರನ್ನು ವಶಕ್ಕೆ ತೆಗೆದುಕೊಂಡಿದ್ದರು. ಶನಿವಾರ ಕ್ರೈಸ್ತ ಭಗಿನಿಯರು ಹಾಗೂ ಸುಖಮಾನ್ ಮಾಂಡವಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.