2024-25ರಲ್ಲಿ ಮೂರು ಪಟ್ಟು ಏರಿಕೆಯಾಗಿ 36,014 ಕೋಟಿ ರೂ.ಗೆ ತಲುಪಿದ ಬ್ಯಾಂಕ್ ವಂಚನೆ ಮೊತ್ತ: ಆರ್‌ಬಿಐ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2024-25ರಲ್ಲಿ ಬ್ಯಾಂಕ್ ವಂಚನೆ ಮೊತ್ತ ಮೂರು ಪಟ್ಟು ಏರಿಕೆಯಾಗಿ 36,014 ಕೋಟಿ ರೂ.ಗಳಿಗೆ ತಲುಪಿದೆ ಎಂದು ಆರ್‌ಬಿಐ ದತ್ತಾಂಶಗಳು ತೋರಿಸಿವೆ.
ಆರ್‌ಬಿಐನ ವಾರ್ಷಿಕ ವರದಿಯ ಪ್ರಕಾರ 2023-24ರಲ್ಲಿ ಬ್ಯಾಂಕ್ ವಂಚನೆ ಮೊತ್ತ 12,230 ಕೋಟಿ ರೂ. ಆಗಿತ್ತು.
ಸರ್ವೋಚ್ಚ ನ್ಯಾಯಾಲಯದ ಮಾರ್ಚ್ 2023ರ ತೀರ್ಪಿಗೆ ಅನುಗುಣವಾಗಿ ಹಿಂದಿನ ಹಣಕಾಸು ವರ್ಷದಲ್ಲಿ ವರದಿಯಾಗಿದ್ದ 18,674 ಕೋಟಿ ರೂ.ಮೊತ್ತದ 122 ಪ್ರಕರಣಗಳಲ್ಲಿ ವಂಚನೆ ವರ್ಗೀಕರಣವನ್ನು ತೆಗೆದುಹಾಕಿದ್ದು ಮತ್ತು ಮರುಪರಿಶೀಲನೆಯ ಬಳಿಕ 2024-25ರ ವಿತ್ತವರ್ಷದಲ್ಲಿ ಹೊಸದಾಗಿ ವರದಿ ಮಾಡಿದ್ದು ಏರಿಕೆಗೆ ಕಾರಣವಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಹಿಂದಿನ ವರ್ಷದಲ್ಲಿ 36,060 ರಷ್ಟಿದ್ದ ನೋಂದಾಯಿತ ವಂಚನೆ ಪ್ರಕರಣಗಳ ಸಂಖ್ಯೆ 2024-25ರಲ್ಲಿ 23,953ಕ್ಕೆ ಇಳಿದಿದೆ.
ಎಲ್ಲ ವಂಚನೆ ಪ್ರಕರಣಗಳಲ್ಲಿ ಖಾಸಗಿ ಬ್ಯಾಂಕುಗಳ ಪಾಲು ಶೇ.59.4(10,088 ಕೋಟಿ ರೂ) ಆಗಿದ್ದು,ಸಾರ್ವಜನಿಕ ವಲಯದ ಬ್ಯಾಂಕುಗಳ ಪಾಲು ಶೇ.29 (25,667 ಕೋಟಿ ರೂ.) ಆಗಿದೆ.
ದತ್ತಾಂಶಗಳು ವಿತ್ತವರ್ಷದಲ್ಲಿ ವರದಿಯಾದ ಒಂದು ಲಕ್ಷ ರೂ. ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ವಂಚನೆಗಳಿಗೆ ಸಂಬಂಧಿಸಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯು ತಿಳಿಸಿದೆ. 2024-25ರಲ್ಲಿ ವರದಿಯಾಗಿರುವ ವಂಚನೆ ಪ್ರಕರಣಗಳು ಅವು ವರದಿಯಾಗುವ ಮುನ್ನ ಹಿಂದಿನ ವರ್ಷದಲ್ಲಿ ನಡೆದಿರಬಹುದು ಎಂದೂ ಅದು ಹೇಳಿದೆ.