ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ನಿಗದಿ ಬ್ಯಾಂಕುಗಳ ವಿವೇಚನೆಗೆ ಬಿಟ್ಟಿದ್ದು: ಆರ್‌ಬಿಐ ಗವರ್ನರ್ ಮಲ್ಹೋತ್ರಾ
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Photo: PTI)
ಮುಂಬೈ: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಎಷ್ಟಿರಬೇಕು ಎನ್ನುವದು ಆಯಾ ಬ್ಯಾಂಕುಗಳ ವಿವೇಚನೆಗೆ ಬಿಟ್ಟಿರುವ ವಿಷಯವಾಗಿದೆ, ಅದರ ಮೇಲೆ ಭಾರತೀಯ ರಿಝರ್ವ ಬ್ಯಾಂಕ್ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕು ನೂತನ ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಮೊತ್ತದ ಅಗತ್ಯವನ್ನು 10,000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಖಾತೆಗಳಲ್ಲಿ ಕನಿಷ್ಠ ಮೊತ್ತ ಎಷ್ಟಿರಬೇಕು ಎನ್ನುವುದನ್ನು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಡಲಾಗಿದೆ. ಕೆಲವು ಬ್ಯಾಂಕುಗಳು 10,000 ರೂ,ಇನ್ನೂ ಕೆಲವು ಬ್ಯಾಂಕುಗಳು 20,000 ರೂ. ಕನಿಷ್ಠ ಮೊತ್ತವನ್ನು ಅಗತ್ಯವಾಗಿಸಿವೆ. ಎಸ್‌ಬಿಐನಂತಹ ಕೆಲವು ಬ್ಯಾಂಕುಗಳು ಯಾವುದೇ ಕನಿಷ್ಠ ಮೊತ್ತವನ್ನು ಅಗತ್ಯವಾಗಿಸಿಲ್ಲ. ಈ ವಿಷಯವು ಆರ್‌ಬಿಐನ ನಿಯಂತ್ರಣ ವ್ಯಾಪ್ತಿಯಲ್ಲಿಲ್ಲ ಎಂದು ಮಲ್ಹೋತ್ರಾ ತಿಳಿಸಿದರು.
ಆ.1ರಿಂದ ತೆರೆಯಲಾಗುವ ಉಳಿತಾಯ ಖಾತೆಗಳಲ್ಲಿ 50,000 ರೂ.ಗಳ ಮಾಸಿಕ ಸರಾಸರಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ,ಆದರೆ ಪ್ರಾಥಮಿಕ ಉಳಿತಾಯ ಖಾತೆಗಳು ಮತ್ತು ವೇತನ ಖಾತೆಗಳನ್ನು ಕನಿಷ್ಠ ಮೊತ್ತದ ಅಗತ್ಯವಿಲ್ಲದೆ ತೆರೆಯುವುದು ಮುಂದುವರಿಯಲಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ನೂತನ ಉಳಿತಾಯ ಖಾತೆಯನ್ನು ಹೊಸ ಉತ್ಪನ್ನವನ್ನಾಗಿ ಮರುರೂಪಿಸಲಾಗಿದ್ದು, ಈ ಮೊದಲು ಈ ಖಾತೆಗಳಿಗೆ ಅನ್ವಯಿಸುತ್ತಿದ್ದ ಹಲವು ಶುಲ್ಕಗಳನ್ನು ಮನ್ನಾ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.