×
Ad

ಮಧ್ಯಂತರ ಜಾಮೀನು ಅವಧಿ ಅಂತ್ಯ | ತಿಹಾರ ಜೈಲಿಗೆ ಮರಳಿದ ಬಾರಾಮುಲ್ಲಾ ಸಂಸದ ಅಬ್ದುಲ್ ರಶೀದ್

Update: 2024-10-28 21:56 IST

ಸಂಸದ ಶೇಖ್ ಅಬ್ದುಲ್ ರಶೀದ್ | PTI

ಹೊಸದಿಲ್ಲಿ : ಮಧ್ಯಂತರ ಜಾಮೀನು ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಸಂಸದ ಶೇಖ್ ಅಬ್ದುಲ್ ರಶೀದ್ ಸೋಮವಾರ ಇಲ್ಲಿಯ ತಿಹಾರ ಜೈಲಿನ ಅಧಿಕಾರಿಗಳ ಮುಂದೆ ಶರಣಾದರು.

ಅವಾಮಿ ಇತ್ತೆಹಾದ್ ಪಾರ್ಟಿಯ ನಾಯಕ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ತನ್ನ ಜಾಮೀನು ಅರ್ಜಿ ಕುರಿತು ಆದೇಶವನ್ನು ಹೊರಡಿಸಲಿದ್ದ ದಿಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮಂದೂಡಿದ ಬಳಿಕ ಮಧ್ಯಾಹ್ನ ತಿಹಾರ ಜೈಲು ತಲುಪಿದರು.

ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.10ರಂದು ಮುಂದೂಡಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ರಶೀದ್ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಹಿಂದೆ ಅವರ ಮಧ್ಯಂತರ ಜಾಮೀನು ಅವಧಿಯನ್ನು ಅ.28ರವರೆಗೆ ವಿಸ್ತರಿಸಲಾಗಿತ್ತು.

2017ರ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಎನ್‌ಐಎ 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಿದಾಗಿನಿಂದ ರಶೀದ್ ತಿಹಾರ ಜೈಲಿನಲ್ಲಿದ್ದಾರೆ. ಅವರು ಜೈಲಿನಲ್ಲಿದ್ದುಕೊಂಡೇ ಬಾರಾಮುಲ್ಲಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಎನ್‌ ಸಿ ನಾಯಕ ಉಮರ್ ಅಬ್ದುಲ್ಲಾರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News