Iran ಅಶಾಂತಿ: ಬಾಸ್ಮತಿ ಅಕ್ಕಿ ರಫ್ತಿಗೆ ಹೊಡೆತ; ಬೆಲೆಗಳಲ್ಲಿ ತೀವ್ರ ಕುಸಿತ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ.13: ಇರಾನಿನಲ್ಲಿ ಉಂಟಾಗಿರುವ ನಾಗರಿಕ ಅಶಾಂತಿ, ಆ ದೇಶಕ್ಕೆ ಭಾರತದಿಂದ ನಡೆಯುವ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಪರಿಣಾಮ ಬೀರುತ್ತಿದ್ದು, ದೇಶೀಯ ಬೆಲೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ರಫ್ತುದಾರರು ಪಾವತಿ ವಿಳಂಬಗಳು ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ (ಐಆರ್‌ಇಎಫ್) ಮಂಗಳವಾರ ತಿಳಿಸಿದೆ.
ಇರಾನಿಗೆ ರಫ್ತು ಒಪ್ಪಂದಗಳಿಗೆ ಸಂಬಂಧಿಸಿದ ಅಪಾಯಗಳನ್ನು ಮರುಮೌಲ್ಯಮಾಪನ ಮಾಡುವಂತೆ ಹಾಗೂ ಸುರಕ್ಷಿತ ಪಾವತಿ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಐಆರ್‌ಇಎಫ್ ರಫ್ತುದಾರರಿಗೆ ಆಗ್ರಹಿಸಿದೆ. ಜೊತೆಗೆ ಇರಾನ್ ಮಾರುಕಟ್ಟೆಗಾಗಿ ಅತಿಯಾದ ದಾಸ್ತಾನು ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದೆ.
ಭಾರತವು ವಿತ್ತವರ್ಷ 2025–26ರ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಇರಾನಿಗೆ 468.10 ಮಿ.ಡಾ. ಮೌಲ್ಯದ 5.99 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದೆ.