Messi ಕಾರ್ಯಕ್ರಮದಲ್ಲಿ ಗದ್ದಲ | ನಿಷ್ಪಕ್ಷಪಾತ ತನಿಖೆಗಾಗಿ ರಾಜೀನಾಮೆ ನೀಡಿದ ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್
Photo Credit: ANI
ಕೋಲ್ಕತ್ತಾ: ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಫುಟ್‌ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದಲ್ಲುಂಟಾಗಿದ್ದ ಗದ್ದಲದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕಾದ ಅಗತ್ಯವನ್ನು ಪ್ರತಿಪಾದಿಸಿ ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆಯ ಪ್ರಕಟನೆ ಬಿಡುಗಡೆ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಡಿಸೆಂಬರ್ 13ರಂದು ನಡೆದ ವಿವೇಕಾನಂದ್ ಯುವ ಭಾರತಿ ಕೃರಂಗನ್ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ತಮ್ಮ ಕ್ರೀಡಾ ಇಲಾಖೆಗೆ ರಾಜೀನಾಮೆ ಸಲ್ಲಿಸಿರುವ ಸಚಿವ ಅರೂಪ್ ಬಿಸ್ವಾಸ್ ಅವರ ಭಾವನೆಯನ್ನು ನಾನು ಅಭಿನಂದಿಸುತ್ತೇನೆ. ಇದು ತುಂಬಾ ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಈ ನಿಷ್ಪಕ್ಷಪಾತ ತನಿಖೆ ಮುಗಿಯುವವರೆಗೂ ನಾನು ಕ್ರೀಡಾ ಇಲಾಖೆಯ ಉಸ್ತುವಾರಿಯನ್ನು ವಹಿಸಲಿದ್ದೇನೆ" ಎಂದು ಹೇಳಿದ್ದಾರೆ.
"ಮೆಸ್ಸಿ ಪ್ರವಾಸದ ವೇಳೆ ಉಂಟಾದ ಗದ್ದಲದ ಘಟನೆಯ ಬಗ್ಗೆ ತನಿಖೆ ನಡೆಸಲು ನೀವೀಗಾಗಲೇ ತನಿಖಾ ತಂಡ ರಚಿಸಿದ್ದೀರಿ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ನಾನು ಕ್ರೀಡಾ ಇಲಾಖೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ಮನವಿಯನ್ನು ಮನ್ನಿಸಿ" ಎಂದು ಸಚಿವ ಅರೂಪ್ ಬಿಸ್ವಾಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.
ಡಿಸೆಂಬರ್ 13ರಂದು ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಅಭಿಮಾನಿಗಳ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು. ಈ ಘಟನೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.