ಭೀಮಾ ಕೋರೆಗಾಂವ್ ಪ್ರಕರಣ: ದಂತ ಶಸ್ತ್ರಚಿಕಿತ್ಸೆಗೆ ತೆರಳಲು ಅನುಮತಿ ಕೋರಿ ವರವರ ರಾವ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
Update: 2025-10-10 15:52 IST
ವರವರ ರಾವ್ (Photo: PTI)
ಮುಂಬೈ : ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕವಿ ವರವರ ರಾವ್ ಅವರು ದಂತ ಶಸ್ತ್ರಚಿಕಿತ್ಸೆಗಾಗಿ ಎರಡು ತಿಂಗಳ ಕಾಲ ಹೈದರಾಬಾದ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ.
ವರವರ ರಾವ್ ಅವರನ್ನು ಆಗಸ್ಟ್ 2018ರಲ್ಲಿ ಹೈದರಾಬಾದ್‌ನ ಅವರ ನಿವಾಸದಿಂದ ಬಂಧಿಸಲಾಗಿತ್ತು. ಆಗಸ್ಟ್ 2022ರಲ್ಲಿ ವೈದ್ಯಕೀಯ ನೆಲೆಯಲ್ಲಿ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ವರವರ ರಾವ್ ಅವರು ತೃಪ್ತಿದಾಯಕ ಕಾರಣವನ್ನು ನೀಡಿಲ್ಲ. ಮುಂಬೈನಲ್ಲಿ ಸಾಕಷ್ಟು ಮತ್ತು ಕೈಗೆಟುಕುವ ದರದಲ್ಲಿ ದಂತ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಾಮೀನು ಷರತ್ತುಗಳ ಪ್ರಕಾರ ವಿಚಾರಣಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಗೆ ಪ್ರಯಾಣಿಸಲು ನ್ಯಾಯಾಲಯದ ಅನುಮತಿಯನ್ನು ಅವರು ಕೋರಿದ್ದರು. ಆದರೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ.