ಭೋಪಾಲ್ ಸಾಹಿತ್ಯ ಹಾಗೂ ಕಲಾ ಉತ್ಸವಕ್ಕೆ ಸಂಘ ಪರಿವಾರದ ವಿರೋಧ; ಬಾಬರ್ ಕುರಿತ ಪುಸ್ತಕದ ಚರ್ಚೆ ರದ್ದು
Photo Credit ; PTI
ಭೋಪಾಲ, ಜ. 16: ಭೋಪಾಲ್ ಸಾಹಿತ್ಯ ಹಾಗೂ ಕಲಾ ಉತ್ಸವದಲ್ಲಿ ನಡೆಯಲಿದ್ದ ‘ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್’ ಪುಸ್ತಕದ ಕುರಿತ ಚರ್ಚೆಯನ್ನು ಪ್ರತಿಭಟನೆಯ ಭೀತಿಯಿಂದ ರದ್ದುಗೊಳಿಸಲಾಯಿತು.
ಚರ್ಚೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಟೀಕಿಸಿ ಪುಸ್ತಕದ ಲೇಖಕ ಆಭಾಸ ಮಾಲದಹಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘‘ಜನವರಿ 10ರಂದು ನನ್ನ ಇತ್ತೀಚಿನ ಪುಸ್ತಕ ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್ ಕುರಿತು ಮಾತನಾಡಲು ಆಹ್ವಾನಿಸಲಾಗಿತ್ತು. ಇದು ಬಾಬರ್ ಕುರಿತ ಜೀವನ ಚರಿತ್ರೆಯ ಎರಡನೇ ಸಂಪುಟವಾಗಿದೆ. ಮೊದಲ ಸಂಪುಟ ಬಾಬರ್’’ ಎಂದು ಅವರು ಹೇಳಿದ್ದಾರೆ.
‘‘ಮೋದಿ ಎಗೈನ್: (ವೈ ಮೋದಿ ಈಸ್ ರೈಟ್ ಫಾರ್ ಇಂಡಿಯಾ) ಆ್ಯನ್ ಎಕ್ಸ್ ಕಮ್ಯೂನಿಸ್ಟ್ಸ್ ಮೆನಿಫೆಸ್ಟೊ’’ (2019) ಪುಸ್ತಕವನ್ನು ಕೂಡ ಬರೆದ, ಮೋದಿಯ ಬೆಂಬಲಿಗನಾಗಿ ಬದಲಾದ ಮಾರ್ಕ್ಸಿಸ್ಟ್ ಆಭಾಸ ಮಾಲದಹಿಯಾರ್, ನನ್ನ ನಿಗದಿತ ಅಧಿವೇಶನ ಮುಂದುವರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಂಘಟಕರು ತಿಳಿಸಿದರು" ಎಂದು ಹೇಳಿದ್ದಾರೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ದಾರಿ ತಪ್ಪಿಸುವ ಹಾಗೂ ಮಾನಹಾನಿಕರ ವರದಿಯಿಂದ ಪ್ರಚೋದನೆಗೊಂಡು ಸಂಘ ಪರಿವಾರದ ಆಕ್ಷೇಪಣೆ ಹಾಗೂ ಪ್ರಸ್ತಾವಿತ ಪ್ರತಿಭಟನೆ ಇದಕ್ಕೆ ಕಾರಣ. ಸಾಹಿತ್ಯ ಉತ್ಸವದಲ್ಲಿ ಬಾಬರ್ ಕುರಿತ ಅಧಿವೇಶನದಲ್ಲಿ ಬಾಬರ್‌ನನ್ನು ವೈಭವೀಕರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಪತ್ರಿಕೆಯ ವರದಿ ತಪ್ಪಾಗಿ ಪ್ರತಿಪಾದಿಸಿತ್ತು ಎಂದು ಸಂಘಟಕರು ತನಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದ್ದಾರೆ.
ವಿಪರ್ಯಾಸವೆಂದರೆ, ಬಾಬರ್ ಅವರ ಚಿತ್ರಣದ ಕುರಿತ ಮಾರ್ಕ್ಸ್‌ವಾದಿ ವಿರೂಪಗಳನ್ನು ಪ್ರಶ್ನಿಸುವ ಉದ್ದೇಶದಿಂದ ಈ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ, ಬಾಬರ್‌ನನ್ನು ವೈಭವಿಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸತ್ಯ ಇದಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಕುರಿತಂತೆ ಆಭಾಸ ಮಾಲದಹಿಯಾರ್ ಮಧ್ಯಪ್ರದೇಶದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಸಿಂಗ್ ಲೋಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.