ಭುವನೇಶ್ವರ | ಕೊಳಗೇರಿಗೆ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಭೇಟಿ,ಸ್ಥಳೀಯರೊಂದಿಗೆ ಸಂವಾದ
ಬಿಲ್ ಗೇಟ್ಸ್ | Photo: NDTV
ಭುವನೇಶ್ವರ (ಒಡಿಶಾ): ಬುಧವಾರ ಇಲ್ಲಿಯ ಕೊಳಗೇರಿಯೊಂದಕ್ಕೆ ಭೇಟಿ ನೀಡಿದ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಅಲ್ಲಿಯ ನಿವಾಸಿಗಳೊಂದಿಗೆ ಸಂವಾದ ನಡೆಸಿದರು.
ಅವರು ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಮಾ ಮಂಗಲಾ ಬಸ್ತಿಯಲ್ಲಿನ ಬಿಜು ಆದರ್ಶ ಕಾಲನಿಗೆ ತೆರಳಿದ್ದರು.
ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸ್ವಸಹಾಯ ಗುಂಪುಗಳೊಂದಿಗೂ ಮಾತನಾಡಿದ ಗೇಟ್ಸ್ ಸರಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
‘ಕೊಳಗೇರಿ ನಿವಾಸಿಗಳು ಭೂಮಿಯ ಹಕ್ಕುಗಳು,ನಳ್ಳಿ ನೀರಿನ ಸಂಪರ್ಕಗಳು,ಶೌಚಾಲಯಗಳು ಮತ್ತು ವಿದ್ಯುತ್ ಸಂಪರ್ಕವನ್ನು ಹೊಂದಿರುವುದನ್ನು ನಾವು ಗೇಟ್ಸ್ ಅವರಿಗೆ ತೋರಿಸಿದ್ದೇವೆ ’ಎಂದು ರಾಜ್ಯದ ಅಭಿವೃದ್ಧಿ ಆಯುಕ್ತೆ ಅನು ಗರ್ಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಸರಕಾರದ ಯೋಜನೆಗಳಿಂದ ನಮ್ಮ ಜೀವನಶೈಲಿಗಳಲ್ಲಿ ಬದಲಾವಣೆಗಳ ಕುರಿತು ಗೇಟ್ಸ್ ವಿಚಾರಿಸಿದರು ಎಂದು ಕಾಲೋನಿಯ ನಿವಾಸಿಯೋರ್ವರು ತಿಳಿಸಿದರು.
ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಒಡಿಶಾ ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಹಯೋಗವನ್ನು ಹೊಂದಿದೆ.