×
Ad

ಭಾರತ ನಿರ್ಮಿತ ಇವಿಎಂನಿಂದ ನಮ್ಮ ಚುನಾವಣಾ ಪ್ರಕ್ರಿಯೆ ದಕ್ಷತೆ ಹೆಚ್ಚಿದೆ: ಭೂತಾನ್ ಚುನಾವಣಾ ಆಯೋಗ ಮುಖ್ಯಸ್ಥ

Update: 2025-01-23 19:58 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ನಮ್ಮ ದೇಶದಲ್ಲಿನ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿನ ದಕ್ಷತೆ ಭಾರತ ನಿರ್ಮಿತ ವಿದ್ಯುನ್ಮಾನ ಮತ ಯಂತ್ರಗಳಿಂದ ಹೆಚ್ಚಿದೆ ಎಂದು ಗುರುವಾರ ಭೂತಾನ್ ಮುಖ್ಯ ಚುನಾವಣಾ ಆಯುಕ್ತ ಡ್ಯಾಶೊ ಸೋನಮ್ ತೋಪ್ಗೆ ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗ ಆಯೋಜಿಸಿದ್ದ ಚುನಾವಣಾ ನಿರ್ವಹಣಾ ಸಂಸ್ಥೆಗಳ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಭೂತಾನ್ ಮುಖ್ಯ ಚುನಾವಣಾ ಆಯುಕ್ತರು, ವಿದ್ಯುನ್ಮಾನ ಮತ ಯಂತ್ರಗಳು ಜನರ ವಿಶ್ವಾಸ ಗಳಿಸಿವೆ ಎಂದು ಪ್ರಶಂಸಿಸಿದರು.

ವಿದ್ಯುನ್ಮಾನ ಮತ ಯಂತ್ರಗಳನ್ನು ಒದಗಿಸಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಅವರು, ನಮ್ಮ ದೇಶದ ಚುನಾವಣೆಯಲ್ಲಿ ಈ ಮತ ಯಂತ್ರಗಳನ್ನು ಬಳಸಲು ಪ್ರಾರಂಭಿಸಿದಾಗಿನಿಂದ ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆ ಕಂಡು ಬಂದಿದೆ ಎಂದು ಶ್ಲಾಘಿಸಿದರು.

ಡಿಜಿಟಲ್ ಗುರುತಿನ ಚೀಟಿ ಕುರಿತು ಮಾತನಾಡಿದ ಅವರು, ಮತದಾರರ ನೈಜತೆಯನ್ನು ಅರಿಯಲು ಭೂತಾನ್ ಬಯೋಮೆಟ್ರಿಕ್ ಏಕೀಕೃತ ರಾಷ್ಟ್ರೀಯ ಗುರುತಿನ ಚೀಟಿ ಹೊಂದಿದೆ ಎಂದು ತಿಳಿಸಿದರು.

ಮುಂಬರುವ ಚುನಾವಣೆಗಳಲ್ಲಿ ಆನ್ ಲೈನ್ ಮತದಾನ ಮಾಡುವ ಸಾಧ್ಯತೆ ಕುರಿತು ಭೂತಾನ್ ಆವಿಷ್ಕಾರ ನಡೆಸುತ್ತಿದೆ ಎಂದೂ ಅವರು ಹೇಳಿದರು.

ಭೂತಾನ್ ಅಲ್ಲದೆ ನೇಪಾಳ ಹಾಗೂ ನಮೀಬಿಯಾದಲ್ಲೂ ಸೀಮಿತ ಸಂಖ್ಯೆಯ ಭಾರತ ನಿರ್ಮಿತ ಮತ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಪದಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕ ಉದ್ಯಮಗಳಾದ ಬಿಇಎಲ್ ಹಾಗೂ ಇಸಿಐಎಲ್, ಭಾರತೀಯ ಚುನಾವಣಾ ಆಯೋಗಕ್ಕಾಗಿ ವಿದ್ಯುನ್ಮಾನ ಮತ ಯಂತ್ರಗಳನ್ನು ತಯಾರಿಸುತ್ತಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸುವ ಮೂಲಕ, 2004ರಿಂದ ಇಲ್ಲಿಯವರೆಗೆ ಸತತ ಐದು ಲೋಕಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳು ಬಳಕೆಯಾದ ಮೈಲಿಗಲ್ಲನ್ನು ದಾಟಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News