ಬಿಹಾರ | ಪೊಲೀಸರ ಬ್ಯಾರಿಕೇಡ್‌ಗೆ ಗುದ್ದಿದ ಬಿಜೆಪಿ ಧ್ವಜ ಹೊಂದಿದ್ದ ಕಾರು: ರಾತ್ರಿ ಗಸ್ತಿನಲ್ಲಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೃತ್ಯು
PC : X \ @zoo_bear
ಪಟ್ನಾ: ಬುಧವಾರ ರಾತ್ರಿ ಬಿಜೆಪಿ ಧ್ವಜ ಹೊಂದಿದ್ದ ಕಾರೊಂದು ಪೊಲೀಸರ ಬ್ಯಾರಿಕೇಡ್‌ಗೆ ಗುದ್ದಿದ ಪರಿಣಾಮ, ಓರ್ವ ಮಹಿಳಾ ಕಾನ್‌ಸ್ಟೇಬಲ್ ಮೃತಪಟ್ಟು, ಇಬ್ಬರು ಅಧಿಕಾರಿಗಳು ಗಾಯಗೊಂಡಿರುವ ಘಟನೆ ಬಿಹಾರದ ಪಟ್ನಾದಲ್ಲಿನ ಅಟಲ್ ಪಥ್‌ನಲ್ಲಿ ನಡೆದಿದೆ. ಈ ಘಟನೆ ರಾತ್ರಿ ಸುಮಾರು 12.30ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.
ವೇಗವಾಗಿ ಧಾವಿಸುತ್ತಿದ್ದ ಕಾರು ಸಬ್ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವಧೇಶ್ ಹಾಗೂ ಮಹಿಳಾ ಕಾನ್ಸ್‌ಟೇಬಲ್ ಕೋಮಲ್‌ಗೆ ಗುದ್ದಿದ ರಭಸಕ್ಕೆ, ಅವರೆಲ್ಲ ಗಾಳಿಯಲ್ಲಿ ಮೇಲಕ್ಕೆ ಹಾರಿ, ಕೆಲ ಮೀಟರ್‌ಗಳಷ್ಟು ದೂರದಲ್ಲಿ ಬಿದ್ದರು ಎಂದು ಹೇಳಲಾಗಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾತ್ರಿ ವೇಳೆ ಹಲವು ಅಧಿಕಾರಿಗಳು ದೈನಂದಿನ ತಪಾಸಣಾ ಕಾರ್ಯದಲ್ಲಿ ನಿರತರಾಗಿರುವುದು ಅದರಲ್ಲಿ ಕಂಡು ಬಂದಿದೆ. ಈ ವೇಳೆ, ಟ್ರಕ್ ಒಂದು ತಪಾಸಣಾ ಸ್ಥಳವನ್ನು ಹಾದು ಹೋಗಿದ್ದು, ಮತ್ತೊಂದು ವಾಹನ ತಪಾಸಣೆಗೆಂದು ನಿಧಾನವಾಗಿ ಚಲಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ, ವೇಗವಾಗಿ ಧಾವಿಸಿದ ಕಾರೊಂದು, ದಿಢೀರನೆ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿರುವುದು ಅದರಲ್ಲಿ ದಾಖಲಾಗಿದೆ.
ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ವರದಿಗಾರರೊಬ್ಬರು, ತಕ್ಷಣವೇ ಘಟನೆಯಲ್ಲಿ ಗಾಯಗೊಂಡಿದ್ದ ನೆರವಿಗೆ ಧಾವಿಸಿದ್ದಾರೆ. ಎಲ್ಲ ಗಾಯಾಳುಗಳನ್ನೂ ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಆದರೆ, ತೀವ್ರವಾಗಿ ಗಾಯಗೊಂಡಿದ್ದ ನಳಂದ ಜಿಲ್ಲೆಯ ನಿವಾಸಿಯಾದ ಮಹಿಳಾ ಕಾನ್ಸ್‌ಟೇಬಲ್ ಕೋಮಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದಿಬ್ಬರು ಪೊಲೀಸ್ ಅಧಿಕಾರಿಗಳಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.