ಬಿಹಾರ | ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆ!
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ,ನ.23: ಬಿಹಾರದಲ್ಲಿ ಎದೆಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿರುವುದಾಗಿ ಅಧ್ಯಯನ ವರದಿಯೊಂದು ತಿಳಿಸಿದೆ. ಆದರೆ ಎದೆಹಾಲಿನಲ್ಲಿ ಪತ್ತೆಯಾದ ಯುರೇನಿಯಂ ಅಂಶವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ)ಯ ಅನುಮತಿಸಲ್ಪಟ್ಟ ಮಿತಿಗಿಂತ ತುಂಬಾ ಕಡಿಮೆಯಿದ್ದು, ಈ ಬಗ್ಗೆ ಆತಂಕ ಪಡಬೇಕಾಗಿಲ್ಲವೆಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಸದಸ್ಯ ಹಾಗೂ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಮಾಜಿ ಸಮೂಹ ನಿರ್ದೇಶಕರಾದ ಡಾ. ದಿನೇಶ್ ಕೆ. ಅಸ್ವಾಲ್ ಅವರು, ಈ ಕುರಿತು ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಧ್ಯಯನದ ವರದಿಯಲ್ಲಿ ಬೆಳಕಿಗೆ ಬಂದ ಅಂಶಗಳ ಬಗ್ಗೆ ಆತಂಕ ಪಡಬೇಕಾಗಿಲ್ಲವೆಂದು ಹೇಳಿದರು. ‘‘ಬಿಹಾರದ ತಾಯಂದಿರ ಎದೆಹಾಲಿನಲ್ಲಿ ಪತ್ತೆಯಾಗಿರುವ ಯುರೇನಿಯಂ ಅಂಶವು ಸುರಕ್ಷಿತ ಮಿತಿಯ ಒಳಗಿದೆ”, ಎಂದರು.
ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ ಹಾಗೂ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಮಿತಿ, ಹೊಸದಿಲ್ಲಿಯ ಏಮ್ಸ್, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಈ ಬಗ್ಗೆ ಅಧ್ಯಯನವನ್ನು ನಡೆಸಿತ್ತು. ಬಿಹಾರದ ತಾಯಂದಿರ ಎದೆಹಾಲಿನಲ್ಲಿ 5 ಪಿಪಿಬಿ (ಪ್ರತಿಬಿಲಿಯದ ಭಾಗಗಳು) ಯುರೇನಿಯಂ ಅಂಶವು ಪತ್ತೆಯಾಗಿರುವುದಾಗಿ ಅಧ್ಯಯನ ವರದಿ ಬಹಿರಂಗಪಡಿಸಿತ್ತು.
40 ಮಂದಿ ತಾಯಂದಿರ ಎದೆಹಾಲನ್ನು ಈ ಅಧ್ಯಯನದಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಎಲ್ಲಾ ಸ್ಯಾಂಪಲ್ ಗಳಲ್ಲಿ ಯುರೇನಿಯಂ (ಯು-238) ಪತ್ತೆಯಾಗಿದೆ.ಶೇ.70ರಷ್ಟು ಶಿಶುಗಳು ಸಂಭಾವ್ಯ ಕಾನ್ಸರ್ ಕಾರಕವಲ್ಲದ ಆರೋಗ್ಯದ ತೊಂದರೆಗಳನ್ನು ಪ್ರದರ್ಶಿಸಿದ್ದರಾದರೂ, ಎಲ್ಲಾ ಸ್ಯಾಂಪಲ್ ಗಳಲ್ಲಿಯೂ ಯುರೇನಿಯಂ ಮಟ್ಟವು ಅನುಮತಿಸಲ್ಪಟ್ಟ ಮಿತಿಗಿಂತ ತುಂಬಾ ಕೆಳಗಿತ್ತು ಮತ್ತು ತಾಯಿ ಮತ್ತು ಶಿಶುಗಳ ಮೇಲೆ ಕನಿಷ್ಠ ಮಟ್ಟದ ಆರೋಗ್ಯ ಪರಿಣಾಮವನ್ನು ಪ್ರದರ್ಶಿಸಿಸುವ ನಿರೀಕ್ಷೆಯಿದೆ ’’ ಎಂದು ಈ ಅಧ್ಯಯನದ ಸಹಲೇಖಕರಾದ ಡಾ. ಅಶೋಕ್ ಶರ್ಮಾ ತಿಳಿಸಿದ್ದರು.