×
Ad

ಬಿಹಾರ ವಿಧಾನಸಭಾ ಚುನಾವಣೆ : 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಜೆಡಿಯು

Update: 2025-10-15 20:17 IST

ನಿತೀಶ್ ಕುಮಾರ್ | Photo Credit: ANI

ಪಾಟ್ನಾ, ಅ.15: ಸಂಯುಕ್ತ ಜನತಾ ದಳ (ಜೆಡಿಯು) ಬುಧವಾರ ಮುಂಬರುವ ಬಿಹಾರ ವಿಧಾನ ಸಭಾ ಚುನಾವಣೆಗೆ 57 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎನ್‌ಡಿಎ ಮೈತ್ರಿಕೂಟದ ಸ್ಥಾನ ಹಂಚಿಕೆ ಬಗ್ಗೆ ಪಕ್ಷದಲ್ಲಿ ಆಂತರಿಕ ಚರ್ಚೆಯಾದ ದಿನಗಳ ಬಳಿಕ ಪಟ್ಟಿಯನ್ನು ಅನಾವರಣಗೊಳಿಸಲಾಗಿದೆ.

ಪ್ರಮುಖ ಅಭ್ಯರ್ಥಿಗಳ ಪೈಕಿ ಅನಂತ್ ಸಿಂಗ್‌ರನ್ನು ಮೋಕಮ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಹೆಚ್ಚುವರಿಯಾಗಿ, ಹಿಂದೆ ಚಿರಾಗ್ ಪಾಸ್ವಾನ್‌ರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ತನಗೆ ಬೇಕೆಂದು ಕೇಳಿದ್ದ ನಾಲ್ಕು ಕ್ಷೇತ್ರಗಳಿಗೂ ಜೆಡಿಯು ಅಭ್ಯರ್ಥಿಗಳನ್ನು ಘೋಷಿಸಿದೆ. ಇದು ಎನ್‌ಡಿಎಯೊಳಗೆ ತನ್ನ ಪಾರಮ್ಯವನ್ನು ಭದ್ರಪಡಿಸುವ ಕ್ರಮವಾಗಿದೆ ಎನ್ನಲಾಗಿದೆ.

ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಖುಷ್ವಾಹಗೆ ಮಹಾನರ್, ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್‌ಗೆ ನಳಂದ ಮತ್ತು ಸುನೀಲ್ ಕುಮಾರ್‌ಗೆ ಭೋರೆ ಕ್ಷೇತ್ರಗಳನ್ನು ನೀಡಲಾಗಿದೆ.

ಮಂಗಳವಾರ, ಎನ್‌ಡಿಎ ಮೈತ್ರಿಕೂಟದ ಇನ್ನೊಂದು ಪಕ್ಷ ಬಿಜೆಪಿಯು ತನ್ನ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸೂರಜ್ ಪಕ್ಷವು ಸೋಮವಾರ ತನ್ನ 65 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ 7.42 ಕೋಟಿ ಮತದಾರರಿದ್ದಾರೆ. ಮತದಾನವು ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳುವುದಿಲ್ಲ: ಪ್ರಶಾಂತ್ ಕಿಶೋರ್

ಮುಂದಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಮರಳುವುದಿಲ್ಲ ಎಂದು ಚುನಾವಣಾ ತಂತ್ರಗಾರ ಹಾಗೂ ಜನ ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ. ಎನ್‌ಡಿಎ ಮೈತ್ರಿಕೂಟವು ಖಂಡಿತವಾಗಿಯೂ ಅಧಿಕಾರಕ್ಕೆ ಮರಳುವುದಿಲ್ಲ ಮತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಅವರು ಹೇಳಿದರು.

ಬಿಹಾರದ 243 ವಿಧಾನಸಭಾ ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆಲ್ಲಲೂ ಜೆಡಿಯು ಪರದಾಡಬೇಕಾಗುತ್ತದೆ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟರು.

‘‘ಎನ್‌ಡಿಎ ಖಂಡಿತವಾಗಿಯೂ ನಿರ್ಗಮನ ಹಾದಿಯಲ್ಲಿದೆ ಮತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮರಳುವುದಿಲ್ಲ’’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಜೊತೆಗೆ ಪ್ರಶಾಂತ್ ಕುಮಾರ್ ಈ ಹಿಂದೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಮೊದಲು ಅವರು ಪಕ್ಷದ ಚುನಾವಣಾ ತಂತ್ರಗಾರನಾಗಿ ಮತ್ತು ಬಳಿಕ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿದ್ದರು. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಪ್ರಶಾಂತ್ ಕಿಶೋರ್‌ರ ಉಸ್ತುವಾರಿಯಲ್ಲಿ ಜೆಡಿಯು ನೇತೃತ್ವದ ಎನ್‌ಡಿಎ ಮೂರನೇ ಎರಡು ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು.

‘‘ಜೆಡಿಯು ಭವಿಷ್ಯ ಏನು ಎನ್ನುವುದನ್ನು ತಿಳಿಯಲು ಚುನಾವಣಾ ತಜ್ಞರೇ ಆಗಬೇಕೆಂದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಾಗ ಚಿರಾಗ್ ಪಾಸ್ವಾನ್ ಬಂಡಾಯ ಎದ್ದು ನಿತೀಶ್ ಕುಮಾರ್ ಅಭ್ಯರ್ಥಿಗಳ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಇಳಿಸಿದ್ದರು. ಈ ಪೈಕಿ ಹೆಚ್ಚಿನ ಅಭ್ಯರ್ಥಿಗಳಿಗೆ ಮಹತ್ವವೇ ಇರಲಿಲ್ಲ. ಹಾಗಾಗಿ, ಜೆಡಿಯು ಸ್ಥಾನಗಳ ಸಂಖ್ಯೆ 43ಕ್ಕೆ ಇಳಿಯಿತು’’ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News