×
Ad

ಬಿಹಾರ ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿ ಕುರಿತು ಪಕ್ಷದಲ್ಲಿ ಅಸಮಾಧಾನ

Update: 2025-11-02 21:09 IST

Photo Credit : PTI

ಹೊಸದಿಲ್ಲಿ,ನ.2: ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರದಿಂದ ಬಿಹಾರ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಚಾರವನ್ನು ಆರಂಭಿಸಲು ಸಜ್ಜಾಗುತ್ತಿದ್ದರೆ ಇತ್ತ ಪಕ್ಷವು ಸಿದ್ಧಗೊಳಿಸಿರುವ ತಾರಾ ಪ್ರಚಾರಕರ ಪಟ್ಟಿಯ ಕುರಿತು ಆಂತರಿಕ ಅಸಮಾಧಾನದ ಗೊಣಗಾಟಗಳು ಆರಂಭಗೊಂಡಿವೆ ಎನ್ನಲಾಗಿದೆ.

ಕಾಂಗ್ರೆಸ್ ಗುರುವಾರ ತನ್ನ 40 ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರಂತಹ ಉನ್ನತ ನಾಯಕರು ಪಕ್ಷದ ಪ್ರಚಾರವನ್ನು ಮುನ್ನಡೆಸಲಿದ್ದಾರೆ.

ಆದಾಗ್ಯೂ ಪಟ್ಟಿಯು ಪಕ್ಷದೊಳಗಿನ ಎಲ್ಲ ವರ್ಗಗಳಿಗೂ ತೃಪ್ತಿಯನ್ನುಂಟು ಮಾಡಿಲ್ಲ ಎಂದು ಆಂತರಿಕ ಮೂಲಗಳು ತಿಳಿಸಿವೆ. ಪಟ್ಟಿಯಲ್ಲಿ ಹಲವಾರು ಪ್ರಮುಖ ಹೆಸರುಗಳು ಇವೆಯಾದರೂ ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್, ಜೈರಾಮ್‌ ರಮೇಶ್‌, ಮನೀಷ್‌ ತಿವಾರಿ ಮತ್ತು ಶಶಿ ತರೂರ್ ಹಾಗೂ ರಾಜ್ಯಸಭಾ ಸಂಸದ ಪ್ರಮೋದ್‌ ತಿವಾರಿ ಅವರಂತಹ ಅನೇಕ ಹಿರಿಯ ನಾಯಕರನ್ನು ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ಅಸಮಾಧಾನ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.

ಬಲ್ಲ ಮೂಲಗಳ ಪ್ರಕಾರ, ಕೇಂದ್ರ ಚುನಾವಣಾ ಸಮಿತಿಯು(ಸಿಇಸಿ) ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ(ಬಿಪಿಸಿಸಿ) ಸಮಾಲೋಚಿಸಿದ ಬಳಿಕ ಪಟ್ಟಿಯನ್ನು ಸಿದ್ಧಗೊಳಿಸಿದೆ. ಬಿಹಾರದ ವೈವಿಧ್ಯಮಯ ಮತದಾರರನ್ನು ಆಕರ್ಷಿಸಬಲ್ಲ ಹಿರಿಯ ನಾಯಕತ್ವ ಮತ್ತು ಪ್ರಾದೇಶಿಕವಾಗಿ ಹೆಚ್ಚು ಪ್ರಭಾವಿ ಕಿರಿಯ ನಾಯಕರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಸಿಇಸಿಯ ಗುರಿಯಾಗಿದೆ.

ಹಿರಿಯ ನಾಯಕರೋರ್ವರ ಪ್ರಕಾರ, ತಳಮಟ್ಟದಲ್ಲಿ ಸಕ್ರಿಯರಾಗಿರುವ ಹಾಗೂ ಯುವಕರು ಮತ್ತು ಸ್ಥಳೀಯ ಮತದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ನಾಯಕರಿಗೆ ಒತ್ತು ನೀಡಲಾಗಿದೆ. ಆದರೂ ನಾಯಕರ ಒಂದು ವರ್ಗವು ವರ್ಷಗಳ ರಾಜಕೀಯ ಪರಿಶ್ರಮದಿಂದ ಗಳಿಸಿರುವ ಅನುಭವ ಮತ್ತು ವಿಶ್ವಾಸಾರ್ಹತೆಯನ್ನು ಉಪೇಕ್ಷಿಸಬಾರದು ಎಂದು ವಾದಿಸುತ್ತಿದೆ.

ಇವರೆಲ್ಲ ರಾಷ್ಟ್ರಿಯ ಮಟ್ಟದಲ್ಲಿ ಪಕ್ಷವನ್ನು ಪ್ರತಿನಿಧಿಸಿದ ನಾಯಕರಾಗಿದ್ದು, ಬಲವಾದ ಸಂವಹನ ಕೌಶಲ್ಯಗಳನ್ನು ಹೊಂದಿದ್ದಾರೆ ಮತ್ತು ಎಲ್ಲ ವರ್ಗಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಅನುಪಸ್ಥಿತಿಯು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹಿರಿಯ ನಾಯಕರೋರ್ವರು ಹೇಳಿದರು.

ಪಟ್ಟಿಯ ಸಂಯೋಜನೆಯು ಅರ್ಹತೆಗಿಂತ ಹೆಚ್ಚಾಗಿ ಆಂತರಿಕ ಪಕ್ಷಪಾತವನ್ನು ಪ್ರತಿಬಿಂಬಿಸಿದೆ. ಟಿಕೆಟ್ ವಿತರಣೆಯಲ್ಲಿ ಟೀಕೆಯನ್ನು ಎದುರಿಸಿದ್ದವರನ್ನು ಪಟ್ಟಿಯಲ್ಲಿ ಸೇರಿಸಿರುವುದು ಮತ್ತು ಸಾಮೂಹಿಕ ಆಕರ್ಷಣೆಯನ್ನು ಹೊಂದಿರುವ ಹಿರಿಯ ನಾಯಕರನ್ನು ಕಡೆಗಣಿಸಿರುವುದು ಅಸಮಾಧಾನವನ್ನು ಸೃಷ್ಟಿಸಿದೆ. ಸಂಘಟನಾತ್ಮಕ ಅನುಭವಕ್ಕಿಂತ ವ್ಯಕ್ತಿನಿಷ್ಠೆಗೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂಬ ಭಾವನೆಯನ್ನು ಇದು ಮೂಡಿಸುತ್ತಿದೆ ಎಂದು ಇನ್ನೋರ್ವ ನಾಯಕರು ಹೇಳಿದರು.

ಬಿಹಾರದ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲಾವರು, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್‌ ರಾಮ್‌ ಮತ್ತು ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅವರಂತಹ ನಾಯಕರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಇವರೆಲ್ಲ ಅಭ್ಯರ್ಥಿಗಳ ಆಯ್ಕೆಯನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂದು ರಾಜ್ಯ ನಾಯಕತ್ವದ ಕೆಲವು ವರ್ಗಗಳು ಆರೋಪಿಸಿವೆ ಎಂದು ನಾಯಕರೋರ್ವರು ಬೆಟ್ಟು ಮಾಡಿದರು.

ಇತ್ತೀಚಿಗೆ ರಾಜೀನಾಮೆಗಳು, ಬಹಿರಂಗ ಪ್ರತಿಭಟನೆಗಳು ಮತ್ತು ಟಿಕೆಟ್ ವಿತರಣೆಯಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತದ ಆರೋಪಗಳು ಪಕ್ಷದಲ್ಲಿಯ ಆಂತರಿಕ ಭಿನ್ನಾಭಿಪ್ರಾಯವನ್ನು ಬಹಿರಂಗಗೊಳಿಸಿದ್ದವು.

ತಾರಾ ಪ್ರಚಾರಕರ ಪಟ್ಟಿಯು ಅಶೋಕ ಗೆಹ್ಲೋಟ್, ತಾರಿಖ್ ಅನ್ವರ್, ಗೌರವ ಗೊಗೊಯಿ, ಮುಹಮ್ಮದ್ ಜಾವೇದ್ ಮತ್ತು ಅಖಿಲೇಶ್‌ ಪ್ರಸಾದ್‌ ಸಿಂಗ್ ಅವರಂತಹ ಪ್ರಮುಖ ನಾಯಕರನ್ನೂ ಒಳಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News