×
Ad

ಬಿಹಾರ ವಿಧಾನಸಭಾ ಚುನಾವಣೆ | ಮೊದಲ ಹಂತದಲ್ಲಿ 64 ಶೇ. ಮತ ಚಲಾವಣೆ

Update: 2025-11-06 21:39 IST

Photo Credit : PTI

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಸಂಭವಿಸಿದ ಒಂದೆರಡು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, 243 ವಿಧಾನಸಭಾ ಕ್ಷೇತ್ರಗಳ ಪೈಕಿ 121 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮೊದಲ ಹಂತದಲ್ಲಿ 64 ಶೇ. ಮತ ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮೊದಲ ಹಂತದ ಮತದಾನದಲ್ಲಿ ಮುಖ್ಯಯಮಂತ್ರಿ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿದೇವಿ, ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ಜನಪ್ರಿಯ ಶಿಕ್ಷಕ ಮತ್ತು ಯೂಟ್ಯೂಬರ್ ಖಾನ್ ಸರ್ ಕ್ಷೇತ್ರಗಳು ಸೇರಿವೆ.

ಕಾಕತಾಳೀಯವೆಂಬಂತೆ, ಮೂವರು ಪ್ರಮುಖ ನಾಯಕರಾದ ನಿತೀಶ್ ಕುಮಾರ್, ರಾಬ್ರಿದೇವಿ ಹಾಗೂ ಲಾಲೂ ಪ್ರಸಾದ್ ಯಾದವ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನಿತೀಶ್ ಕುಮಾರ್ ಹಾಗೂ ರಾಬ್ರಿ ದೇವಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವುದು ಇದಕ್ಕೆ ಕಾರಣವಾದರೆ, ಮೇವು ಹಗರಣದಲ್ಲಿ ದೋಷಿ ಎಂದು ಘೋಷಿತಗೊಂಡಿರುವುದರಿಂದ, ಲಾಲೂ ಪ್ರಸಾದ್ ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಂಡಿದ್ದಾರೆ.

ಇಂದು ನಡೆದ ಮೊದಲ ಹಂತದ ಮತದಾನದಲ್ಲಿ ಮುಂಚಿತವಾಗಿಯೇ ಮತ ಚಲಾಯಿಸಿದವರ ಪೈಕಿ ಮುಖ್ಯಿಮಂತ್ರಿ ನಿತೀಶ್ ಕುಮಾರ್ ಕೂಡಾ ಸೇರಿದ್ದು, ಪಾಟ್ನಾದಿಂದ 50 ಕಿಮೀ ದೂರದಲ್ಲಿರುವ ಬಖ್ತಿಯಾರ್ ಪುರ್ ಗೆ ತೆರಳಿ, ಅವರು ತಮ್ಮ ಮತ ಚಲಾಯಿಸಿದರು. ಮತ್ತೊಂದೆಡೆ, ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪುತ್ರಿಯರೂ ಸೇರಿದಂತೆ ಅವರ ಕುಟುಂಬ ವರ್ಗದವರು ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಮತ ಚಲಾಯಿಸಿದರು.

ಇಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು, ಸಂಜೆ 6 ಗಂಟೆಗೆ ಮುಕ್ತಾಯವಾದ ಮೊದಲ ಹಂತದ ಮತದಾನದಲ್ಲಿ ಬೇಗುಸರಾಯಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಮತ ಚಲಾವಣೆಯಾಗಿದ್ದರೆ, ಶೇಖ್ ಪುರದಲ್ಲಿ ಅತ್ಯಂತ ಕನಿಷ್ಠ ಪ್ರಮಾಣದ ಮತ ಚಲಾವಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News