×
Ad

ಬಿಹಾರ ವಿಧಾನಸಭಾ ಚುನಾವಣೆ | ಸಮಷ್ಠಿಪುರದಲ್ಲಿ ಎಸೆದಿದ್ದ ವಿವಿಪ್ಯಾಟ್ ಸ್ಲಿಪ್ ಪತ್ತೆ!

ಅವು ಅಣಕು ಚುನಾವಣೆಯ ವಿವಿಪ್ಯಾಟ್ ಸ್ಲಿಪ್ ಎಂದ ಅಧಿಕಾರಿಗಳು

Update: 2025-11-08 18:40 IST

Screengrab : X \ @nidhiambedkar

ಪಾಟ್ನಾ: ಶನಿವಾರ ವಿವಿಪ್ಯಾಟ್ ಸ್ಲಿಪ್ ಗಳು ಸಮಷ್ಠಿಪುರದ ರಸ್ತೆಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯನಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ವಿವಾದವೊಂದು ಭುಗಿಲೆದ್ದಿದೆ. ಈ ವಿವಿಪ್ಯಾಟ್ ಸ್ಲಿಪ್ ಗಳನ್ನು ಇವಿಎಂಗಳಿಂದ ಹೊರ ತೆಗೆದು ಬಿಸಾಡಲಾಗಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ಆರೋಪಿಸಿದೆ.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ಈ ವಿವಿಪ್ಯಾಟ್ ಸ್ಲಿಪ್ ಗಳು ಗುರುವಾರ ಚುನಾವಣೆ ನಡೆಯುವುದಕ್ಕೂ ಮುನ್ನ ನಡೆದಿದ್ದ ಅಣಕು ಮತದಾನದ ವಿವಿಪ್ಯಾಟ್ ಸ್ಲಿಪ್ ಗಳೇ ಹೊರತು, ನೈಜ ಮತದಾನದ್ದಲ್ಲ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಮಷ್ಠಿಪುರ್ ಜಿಲ್ಲಾಧಿಕಾರಿ ರೋಷನ್ ಕುಶ್ವಾತಹ, “ಹೆಚ್ಚುವರಿ ಸ್ಲಿಪ್ ಗಳನ್ನು ಕತ್ತರಿಸಿ ಬಿಸಾಡಲಾಗಿದ್ದರೂ, ಕೆಲವು ಸ್ಲಿಪ್ ಗಳು ಚೂರುಚೂರು ಮಾಡದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

“ನಾವು ಸ್ಥಳದ ಪರಿಶೀಲನೆ ನಡೆಸಿದ್ದು, ಆ ವಿವಿಪ್ಯಾಟ್ ಸ್ಲಿಪ್ ಗಳು ಅಣಕು ಮತದಾನದ ಸ್ಲಿಪ್ ಗಳಾಗಿವೆ. ಕೆಲವನ್ನು ಸೂಕ್ತವಾಗಿ ಚೂರುಚೂರು ಮಾಡಿಲ್ಲ. ಇವಿಎಂ ಸಂಖ್ಯೆಗಳು ಇದಕ್ಕೆ ಯಾವ ಚುನಾವಣಾ ಸಿಬ್ಬಂದಿಗಳು ಕಾರಣ ಎಂಬುದನ್ನು ಪತ್ತೆ ಹಚ್ಚಲು ಸಹಾಯ ಮಾಡಲಿವೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ” ಎಂದೂ ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಘಟನೆಯ ವೀಡಿಯೊದಲ್ಲಿ ಸ್ಥಳೀಯರು ಪಕ್ಷಗಳ ಚಿಹ್ನೆಗಳು ಮುದ್ರಣಗೊಂಡಿರುವ ವಿವಿಪ್ಯಾಟ್ ಸ್ಲಿಪ್ ಗಳನ್ನು ಆಯ್ದುಕೊಳ್ಳುತ್ತಿರುವುದು ಸೆರೆಯಾಗಿದೆ.

ಈ ಘಟನೆಯ ಬೆನ್ನಿಗೇ, ಸಂಬಂಧಿತ ಸಹಾಯಕ ಚುನಾವಣಾಧಿಕಾರಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಆದೇಶಿಸಿದೆ. ಸಹಾಯಕ ಚುನಾವಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳ.ಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ದೃಢಪಡಿಸಿದ್ದಾರೆ. ಸ್ಥಳ ಪರಿಶೀಲನೆಯ ನಂತರ, ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೂ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News