ಬಿಹಾರ ವಿಧಾನ ಸಭಾ ಚುನಾವಣೆ | ನ.11ರಂದು ಅಂತಿಮ ಹಂತದ ಮತದಾನ, ಬಿಗಿ ಭದ್ರತೆ
Photo Credit : PTI
ಪಾಟ್ನಾ, ನ. 10: ನ. 11ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಎರಡನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ 122 ವಿಧಾನ ಸಭಾ ಕ್ಷೇತ್ರಗಳ 40,073 ಗ್ರಾಮೀಣ ಕ್ಷೇತ್ರಗಳ ಮತಗಟ್ಟೆ ಸೇರಿದಂತೆ 45,399 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
‘‘ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ಬಿಹಾರದಲ್ಲಿ 4 ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’’ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.
ಬಿಹಾರದಲ್ಲಿ ಕೇಂದ್ರ ಶಸಸ್ತ್ರ ಪೊಲೀಸ್ ಪಡೆಯ ಸುಮಾರು 500 ಕಂಪೆನಿಗಳು ಚುನಾವಣಾ ಪೂರ್ವ ಕರ್ತವ್ಯಗಳಲ್ಲಿ ನಿರತವಾಗಿವೆ. ಅಲ್ಲದೆ, ಸಿಎಪಿಎಫ್ ನ 500ಕ್ಕೂ ಅಧಿಕ ಕಂಪೆನಿಗಳು ರಾಜ್ಯಕ್ಕೆ ಆಗಮಿಸಿವೆ.
‘‘ಇದಲ್ಲದೆ, ಅಕ್ಟೋಬರ್ 3ನೇ ವಾರದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಹೆಚ್ಚುವರಿ ಸುಮಾರು 500 ಕಂಪೆನಿಗಳು ಆಗಮಿಸಿವೆ. ಬಿಹಾರ್ ಪೊಲೀಸ್‌ನ 60,000ಕ್ಕೂ ಅಧಿಕ ಸಿಬ್ಬಂದಿ ಈಗಾಗಲೇ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿವೆ’’ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತರ ರಾಜ್ಯಗಳ ಮೀಸಲು ಬೆಟಾಲಿಯನ್ ಗಳ ಸುಮಾರು 2,000 ಸಿಬ್ಬಂದಿ, ಬಿಹಾರ ವಿಶೇಷ ಶಸಸ್ತ್ರ ಪೊಲೀಸ್‌ನ 30,000 ಸಿಬ್ಬಂದಿ, 20,000ಕ್ಕೂ ಅಧಿಕ ಹೋಮ್ ಗಾರ್ಡ್ ಗಳು, ಸುಮಾರು 19,000 ನೂತನವಾಗಿ ನೇಮಕರಾದ ಕಾನ್ಸ್‌ಟೇಬಲ್ ಗಳು (ತರಬೇತಿ ಪಡೆಯುತ್ತಿರುವವರು) ಹಾಗೂ ಸುಮಾರು 1.5 ಲಕ್ಷ ಚೌಕಿದಾರರು (ಗ್ರಾಮೀಣ ಪೊಲೀಸರು) ಕೂಡ ಎರಡು ಹಂತದ ಮತದಾನದ ಕರ್ತವ್ಯದಲ್ಲಿ ನಿರತವಾಗಿವೆ.