×
Ad

Bihar | ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕ: ಪಿಕಪ್ ವ್ಯಾನ್‌ನಿಂದ ಮೀನು ಹೊತ್ತೊಯ್ದ ದಾರಿಹೋಕರು!

Update: 2026-01-17 23:25 IST

PC | x.com

ಪಾಟ್ನಾ: ಮೀನು ಸಾಗಾಟ ನಡೆಸುತ್ತಿದ್ದ ಪಿಕಪ್ ವ್ಯಾನ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲೇ ಮೃತಪಟ್ಟಿದ್ದು, ಈ ವೇಳೆ ರಸ್ತೆಯಲ್ಲೇ ಮೃತದೇಹ ಬಿದ್ದಿದ್ದರೂ ಪಿಕಪ್ ವ್ಯಾನ್‌ನಲ್ಲಿದ್ದ ಮೀನುಗಳನ್ನು ದಾರಿಹೋಕರು ಹೊತ್ತೊಯ್ದ ಘಟನೆ ಪಾಟ್ನಾದ ಪುಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಝಾಝಿಹಾಟ್ ಗ್ರಾಮದಲ್ಲಿ ನಡೆದಿದೆ.

17 ವರ್ಷದ ರಿತೇಶ್ ಕುಮಾರ್ ಬೆಳಗ್ಗಿನ ಕೋಚಿಂಗ್ ತರಗತಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಪಿಕಪ್ ವ್ಯಾನ್ ಒಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿತೇಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ಬಾಲಕನ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದರೆ, ಅನತಿ ದೂರದಲ್ಲಿ ಇದಕ್ಕೆ ವ್ಯತಿರಿಕ್ತವಾದ ದೃಶ್ಯಗಳು ಕಂಡು ಬಂದಿವೆ. ಅಪಘಾತದ ವೇಳೆ ಪಿಕಪ್ ವ್ಯಾನ್‌ ನಿಂದ ಮೀನುಗಳು ರಸ್ತೆಯೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿಗೆ ಸಹಾಯ ಮಾಡುವ, ಆ್ಯಂಬುಲೆನ್ಸ್ ಕರೆಸುವ ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಬದಲು, ಸ್ಥಳದಲ್ಲಿ ನೆರೆದಿದ್ದವರು ಮೀನನ್ನು ಹೊತ್ತೊಯ್ಯಲು ಪ್ರಾರಂಭಿಸಿದ್ದಾರೆ. ರಿತೇಶ್ ಮೃತದೇಹವು ರಸ್ತೆಯ ಮೇಲೆ ಬಿದ್ದಿದ್ದರೂ, ದಾರಿಹೋಕರು ಮೀನುಗಳನ್ನು ಗೋಣಿಚೀಲಗಳಲ್ಲಿ ತುಂಬಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪುಪ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜನರನ್ನು ಸ್ಥಳದಿಂದ ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

“ಅಪಘಾತ ಸಂಭವಿಸಿದಾಗ ಸಂತ್ರಸ್ತ ಬಾಲಕನು ಕೋಚಿಂಗ್ ತರಗತಿಗೆ ಹಾಜರಾಗಲು ತೆರಳುತ್ತಿದ್ದ. ಅಪಘಾತದಲ್ಲಿ ಭಾಗಿಯಾದ ಪಿಕಪ್ ವ್ಯಾನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಸ್ಥಳದಿಂದ ಪರಾರಿಯಾಗುವಲ್ಲಿ ವ್ಯಾನ್ ಚಾಲಕ ಯಶಸ್ವಿಯಾಗಿದ್ದಾನೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಪುಪ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಮಶಂಕರ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News