ಬಿಹಾರ | ನಿತೀಶ್ ಕುಮಾರ್ ಸಚಿವ ಸಂಪುಟ ವಿಸ್ತರಣೆ: ಬಿಜೆಪಿಯ ಏಳು ಮಂದಿ ಹೊಸಬರಿಗೆ ಸಚಿವ ಸ್ಥಾನ
ನಿತೀಶ್ ಕುಮಾರ್ | PC : PTI
ಪಾಟ್ನಾ: ಬುಧವಾರ ತಮ್ಮ ಸಚಿವ ಸಂಪುಟ ವಿಸ್ತರಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಏಳು ಮಂದಿ ಹೊಸಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಎಲ್ಲ ಏಳು ಸಚಿವರು ಮೈತ್ರಿ ಪಕ್ಷವಾದ ಬಿಜೆಪಿಗೆ ಸೇರಿದ್ದಾರೆ.
ರಾಜ್ಯಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದ ಏಳು ಮಂದಿ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಇದರಿಂದ ನಿತೀಶ್ ಕುಮಾರ್ ಸರಕಾರದ ಸಚಿವ ಸಂಪುಟ ಗಾತ್ರ 36ಕ್ಕೆ ಏರಿಕೆಯಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಪೈಕಿ ಜಿಬೇಶ್ ಕುಮಾರ್, ಸಂಜಯ್ ಸರೌಗಿ, ಸುನೀಲ್ ಕುಮಾರ್, ರಾಜು ಕುಮಾರ್ ಸಿಂಗ್, ಮೋತಿ ಲಾಲ್ ಪ್ರಸಾದ್, ವಿಜಯ್ ಕುಮಾರ್ ಮಂಡಲ್ ಹಾಗೂ ಕೃಷ್ಣ ಕುಮಾರ್ ಮಂಟು ಸೇರಿದ್ದಾರೆ.
ಇದಕ್ಕೂ ಮುನ್ನ, ಇಂದು ಬೆಳಗ್ಗೆ ತಮ್ಮ ಪಕ್ಷದ ‘ಒಬ್ಬ ನಾಯಕ, ಒಂದು ಹುದ್ದೆ’ ನೀತಿಯನ್ನು ಪಾಲಿಸಲು ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.