ಬಿಹಾರ| ಹಳಿ ತಪ್ಪಿದ ಗೂಡ್ಸ್ ರೈಲಿನ ಎಂಟು ಬೋಗಿಗಳು: ಪಾಟ್ನಾ-ದಿಲ್ಲಿ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ
Update: 2025-12-28 12:45 IST
Photo| timesofindia
ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ ಎಂಟು ಬೋಗಿಗಳು ಶನಿವಾರ ತಡರಾತ್ರಿ ಹಳಿ ತಪ್ಪಿವೆ. ಹೌರಾ-ಪಾಟ್ನಾ-ದಿಲ್ಲಿ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಿಂದ ಯಾವುದೇ ಸಾವುನೋವು ವರದಿಯಾಗಿಲ್ಲ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ರಾತ್ರಿ ಸುಮಾರು 11.25ರ ವೇಳೆಗೆ ಪೂರ್ವ ರೈಲ್ವೆಯ ಅಸನ್ಸೋಲ್ ವಿಭಾಗದಡಿಯ ಲಹಬೋನ್ ಮತ್ತು ಸಿಮುಲ್ತಲ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಘಟನೆಯಿಂದ ರಾತ್ರೋರಾತ್ರಿ ಹತ್ತಾರು ರೈಲು ಸಂಚಾರಗಳಲ್ಲಿ ವ್ಯತ್ಯಯವುಂಟಾಗಿದ್ದು, ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಿದ್ದಾರೆ. ರೈಲು ಸಂಚಾರವನ್ನು ಮರು ಸ್ಥಾಪಿಸುವ ಕೆಲಸಗಳು ಸದ್ಯ ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.