ಮುದ್ರಣ ಮಾಧ್ಯಮಗಳ ಜಾಹೀರಾತು ದರದಲ್ಲಿ ಶೇ.27ರಷ್ಟು ಏರಿಕೆಗೆ ಕೇಂದ್ರ ಸರಕಾರ ನಿರ್ಧಾರ : ಬಿಹಾರ ಚುನಾವಣೆ ಬಳಿಕ ಜಾರಿ
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ಅ.25: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ಕೇಂದ್ರ ಸರಕಾರವು ಮುದ್ರಣ ಮಾಧ್ಯಮದ ಜಾಹೀರಾತುದರಗಳಲ್ಲಿ ಶೇ.27ರಷ್ಟು ಏರಿಕೆ ಮಾಡಲಿದೆಯೆಂದು ತಿಳಿದು ಬಂದಿದೆ.
ಸಾಂಪ್ರದಾಯಿಕ ಮಾಧ್ಯಮಗಳನ್ನು ಬಲಪಡಿಸುವ ಸರಕಾರದ ಪ್ರಯತ್ನಗಳ ಭಾಗವಾಗಿ ಈ ನಡೆಯನ್ನು ಇರಿಸಲಾಗಿದೆಯೆಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಪ್ರದಾಯಿಕ ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಸಾಂಪ್ರದಾಯಿಕ ಮಾಧ್ಯಮ ಕ್ಷೇತ್ರದ ವೃತ್ತಿಪರ ಜೀವನೋಪಾಯಗಳನ್ನು ರಕ್ಷಿಸಲು ಹಾಗೂ ಬೆಳವಣಿಗೆಯನ್ನು ಉತ್ತೇಜಿಸಲು, ಮುದ್ರಣ, ಟಿವಿ ಹಾಗೂ ಚಿತ್ರರಂಗಗಳಲ್ಲಿ ಕೇಂದ್ರ ಸರಕಾರ ಸುಧಾರಣೆಗಳನ್ನು ಪರಿಚಯಿಸಲಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ಮುದ್ರಣ ಮಾಧ್ಯಮಗಳ ಜಾಹೀರಾತು ದರದಲ್ಲಿ ಶೇ.27ರಷ್ಟು ಏರಿಕೆ ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದೇವೆ.
ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಜಾಹೀರಾತುದರ ಪರಿಷ್ಕರಣೆ ಮಾಡಿದೆ. ಈ ಹಿಂದೆ ಕೇಂದ್ರ ಸರಕಾರವು 2019ರ ಜನವರಿಯಲ್ಲಿ ಜಾಹೀರಾತುದರದಲ್ಲಿ ಶೇ.25ರಷ್ಟು ಏರಿಕೆ ಮಾಡಿತ್ತು.