ಬಿಹಾರ ಚುನಾವಣೆ : ಎನ್‍ಡಿಎ ದೋಸ್ತಿಗಳ ನಡುವೆ ಭಿನ್ನಾಭಿಪ್ರಾಯ
PC | timesofindia
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ವಿಚಾರದಲ್ಲಿ ಆಡಳಿತಾರೂಢ ಎನ್‍ಡಿಎ ಪಾಲುದಾರ ಪಕ್ಷವಾದ ಬಿಜೆಪಿ ಹಾಗೂ ಜೆಡಿಯು ನಡುವೆ ಭಿನ್ನಾಭಿಪ್ರಾಯ ಮೂಡಿದೆ. ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಮತ್ತು ಯಾವುದೇ ತೊಂದರೆಯಾಗದಂತೆ ಸುಲಲಿತವಾಗಿ ನೆರವೇರಿಸುವ ದೃಷ್ಟಿಯಿಂದ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರೆ, ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಯು ಆಗ್ರಹಿಸಿದೆ.
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಉತ್ತಮವಾಗಿದ್ದು, ಚಾತ್ ಹಬ್ಬಕ್ಕೆ ವಲಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಒಂದೇ ಹಂತದಲ್ಲಿ ಮತದಾನ ಮಾಡಿದರೆ ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಲು ಇದು ಕಾರಣವಾಗುತ್ತದೆ ಎಂದು ಜೆಡಿಯು ಪ್ರತಿಪಾದಿಸಿದೆ.
ಶನಿವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಗರಿಷ್ಠ ಎರಡು ಹಂತದಲ್ಲಿ ಚುನಾವಣೆ ನಡೆಸುವುದರಿಂದ ಶ್ರಮ ಕಡಿಮೆ ಮಾಡಲು ಸಾಧ್ಯ ಮತ್ತು ಚುನಾವಣಾ ಸಂಬಂಧಿತ ವೆಚ್ಚಗಳ ಕಡಿತ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಜತೆ ನಡೆಸಿದ ಮಾತುಕತೆಯ ವೇಳೆ ಈ ಸಲಹೆಗಳು ಬಂದಿವೆ. ಪಾಟ್ನಾದಲ್ಲಿ ಚುನಾವಣಾ ಸಿದ್ಧತೆ ಪರಿಶೀಲಿಸಿದ ಬಳಿಕ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸುವ ನಿರೀಕ್ಷೆ ಇದೆ.
ಬಿಜೆಪಿ, ಆರ್‌ಜೆಡಿ, ಸಿಪಿಐ-ಎಂಎಲ್ ಮತ್ತು ಎಲ್‍ಜೆಪಿ(ರಾಮ್ ವಿಲಾಸ್) ಗರಿಷ್ಠ ಎರಡು ಹಂತಗಳ ಚುನಾವಣೆಗೆ ಸಲಹೆ ಮಾಡಿದ್ದರೆ, ಸಿಎಂ ನೇತೃತ್ವದ ಜೆಡಿಯು ಒಂದೇ ಹಂತದಲ್ಲಿ ಮತದಾನ ಮುಕ್ತಾಯಗೊಳಿಸುವಂತೆ ಆಗ್ರಹಿಸಿದೆ. ಹಲವು ಮಂದಿ ಬಿಹಾರಿ ವಲಸಿಗರು ಛಾತ್ ಹಬ್ಬಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಬಹುದು ಎನ್ನುವುದು ಜೆಡಿಯುನ ವಾದ.