×
Ad

ರೈತರ ಬೆಳೆಗಳ ನಾಶ | 5 ಜಿಲ್ಲೆಗಳಲ್ಲಿ ನೀಲ್‌ ಗಾಯ್‌, ಕಾಡು ಹಂದಿಯ ಹತ್ಯೆಗೆ ಬಿಹಾರ ಸರಕಾರದ ಆದೇಶ

Update: 2024-09-24 18:33 IST

ಸಾಂದರ್ಭಿಕ ಚಿತ್ರ | PTI 

ಪಾಟ್ನಾ : ರೈತರ ಬೆಳೆಗಳಿಗೆ ಭಾರಿ ಹಾನಿಯನ್ನುಂಟು ಮಾಡುತ್ತಿರುವ ನೀಲ್‌ ಗಾಯ್‌ಗಳು ಹಾಗೂ ಕಾಡು ಹಂದಿಗಳನ್ನು ಐದು ಜಿಲ್ಲೆಗಳಲ್ಲಿ ಹತ್ಯೆಗೈಯ್ಯುವ ಅಭಿಯಾನಕ್ಕೆ ಈ ತಿಂಗಳಿನಿಂದ ಚಾಲನೆ ನೀಡಲಾಗುವುದು ಎಂದು ಬಿಹಾರ ಸರಕಾರ ಮಂಗಳವಾರ ಪ್ರಕಟಿಸಿದೆ.

ಈ ಅಭಿಯಾನವು ನೀಲ್‌ ಗಾಯ್‌ ಹಾಗೂ ಕಾಡು ಹಂದಿಗಳಿಂದ ತೀವ್ರ ತೊಂದರೆಗಳಾಗಿರುವ ವೈಶಾಲಿ, ಪೂರ್ವ ಚಂಪಾರಣ್, ಬಕ್ಸ್, ಸಿವಾನ್ ಹಾಗೂ ಸಮಷ್ಟಿಪುರದಲ್ಲಿ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನಡೆಯಲಿದೆ ಎಂದು ವರದಿಯಾಗಿದೆ.

“ಸಮಸ್ಯೆ ಎಲ್ಲಿ ಗಂಭೀರವಾಗಿದೆಯೋ, ಆ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಂತಹ 50 ಪ್ರಾಣಿಗಳನ್ನು ಹತ್ಯೆಗೈಯ್ಯಲು ಸಂಬಂಧಿತ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು” ಎಂದು ರಾಜ್ಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತೊಂದರೆಗೊಳಗಾಗಿರುವ ಪ್ರದೇಶಗಳಲ್ಲಿ ನೀಲ್‌ ಗಾಯ್‌ಗಳು ಹಾಗೂ ಕಾಡು ಹಂದಿಗಳನ್ನು ಹತ್ಯೆಗೈಯ್ಯುವ ನಿರ್ಧಾರವನ್ನು ರಾಜ್ಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಪ್ರೇಮ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಮಲೋಚಾನ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾಧಾರಣ ಅಂದಾಜಿನ ಪ್ರಕಾರ, ಬಿಹಾರದಲ್ಲಿ ಸುಮಾರು 3 ಲಕ್ಷ ನೀಲ್‌ ಗಾಯ್‌ಗಳು ಹಾಗೂ ಸುಮಾರು 67,000 ಕಾಡು ಹಂದಿಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀಲ್‌ ಗಾಯ್‌ಗಳು ಮತ್ತು ಕಾಡು ಹಂದಿಗಳ ಕಾಟದಿಂದಾಗಿ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಹೆಕ್ಟೇರ್ ಗೆ 50,000 ರೂ. ಬೆಳೆ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News