ವೃದ್ಧರಿಗೆ ಮನೆ ಬಾಗಿಲಲ್ಲೇ ಆರೋಗ್ಯ ಸೌಲಭ್ಯ: ಬಿಹಾರ ಸರಕಾರ ಘೋಷಣೆ
ನಿತೀಶ್ ಕುಮಾರ್ | Photo Credit : PTI
ಪಾಟ್ನಾ, ಜ. 3: ವೃದ್ಧರಿಗೆ ಅವರ ಮನೆ ಬಾಗಿಲಲ್ಲೇ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಯೋಜನೆ ಜಾರಿಗೆ ತರಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಘೋಷಿಸಿದ್ದಾರೆ.
ಬಿಹಾರ್ ಸರಕಾರದ ಕಾರ್ಯಕ್ರಮವಾದ ‘ಸಾತ್ ನಿಶ್ಚಯ್’ (7 ನಿರ್ಣಯಗಳು) ಅಡಿಯಲ್ಲಿ ಬರುವ ಈ ಯೋಜನೆಯನ್ನು ಆದ್ಯತೆಗೆ ಅನುಗುಣವಾಗಿ ಅನುಷ್ಠಾನಗೊಳಿಸುವಂತೆ ನಿತೀಶ್ ಕುಮಾರ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
‘ಎಕ್ಸ್’ನ ಪೋಸ್ಟ್‌ನಲ್ಲಿ ನಿತೀಶ್ ಕುಮಾರ್, ರಾಜ್ಯದ ಹಿರಿಯ ನಾಗರಿಕರಿಗೆ ಅಗತ್ಯದ ಆರೋಗ್ಯ ಸೇವೆಗಳು ಸಿಗುವಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಸೇವೆಗಳಲ್ಲಿ ನರ್ಸಿಂಗ್‌ಗೆ ನೆರವು, ಮನೆಯಲ್ಲಿ ರೋಗಶಾಸ್ತ್ರ ಪರೀಕ್ಷೆ, ರಕ್ತದೊತ್ತಡ ತಪಾಸಣೆ, ಇಸಿಜಿ ಪರೀಕ್ಷೆ, ಫಿಸಿಯೋಥೆರಪಿ ಒಳಗೊಂಡಿದೆ. ತುರ್ತು ಪರಿಸ್ಥತಿ ಸಂದರ್ಭ ಅವರ ಮನೆಯಲ್ಲೇ ಇತರ ಎಲ್ಲಾ ರೀತಿಯ ವೈದ್ಯಕೀಯ ನೆರವು ನೀಡುವುದನ್ನು ಕೂಡ ಇದು ಒಳಗೊಂಡಿದೆ ಎಂದಿದ್ದಾರೆ.
ರಾಜ್ಯದ ಹಿರಿಯ ನಾಗರಿಕರಿಗೆ ಅವರ ಮನೆಗಳಲ್ಲಿ ಆರೋಗ್ಯ ಸಂಬಂಧಿತ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ತ್ವರಿತವಾಗಿ ಕೆಲಸ ನಿರ್ವಹಿಸಲು ನಿರ್ದೇಶಿಸಲಾಗಿದೆ ಎಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
2005 ನವೆಂಬರ್ 24ರಂದು ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ನ್ಯಾಯದೊಂದಿಗೆ ಅಭಿವೃದ್ಧಿ ತತ್ವದಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರ ಸುಧಾರಣೆಗೆ ಹಾಗೂ ಪ್ರತಿಯೊಂದು ವಲಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ನಾವು ಸಂಪೂರ್ಣ ಬಿಹಾರ್ ಅನ್ನು ನಮ್ಮ ಕುಟುಂಬ ಎಂದು ಪರಿಗಣಿಸಿದ್ದೇವೆ ಹಾಗೂ ಪ್ರತಿಯೊಬ್ಬರ ಗೌರವ, ಘನತೆ ಬಗ್ಗೆ ಕಾಳಜಿ ವಹಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಬಿಹಾರವನ್ನು ಅಭಿವೃದ್ದಿ ಹೊಂದಿದೆ ರಾಜ್ಯವನ್ನಾಗಿ ಮಾಡಲು ರಾಜ್ಯ ಸರಕಾರ ‘ಸಾತ್ ನಿಶ್ಚಯ್’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಎಂದು ನಿತೀಶ್ ಕುಮಾರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ