×
Ad

ಬಿಹಾರ ಚುನಾವಣೆ: ಎನ್‌ಡಿಎ ಪ್ರಬಲ ಮುನ್ನಡೆಗೆ ನೆರವಾದ ಮಹಿಳೆಯರ ದಾಖಲೆಯ ಮತದಾನ

Update: 2025-11-14 16:18 IST

Photo credit: PTI

ಪಾಟ್ನಾ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತಿದ್ದು, ಎನ್‌ಡಿಎ ನಾಗಾಲೋಟಕ್ಕೆ ಮಹಿಳೆಯರಿಂದ ದಾಖಲೆ ಮತದಾನವು ನೆರವಾಗಿದೆ ಎನ್ನುವುದನ್ನು ಸೂಚಿಸುತ್ತಿವೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆಯಲ್ಲಿದೆ.

ಮತದಾನೋತ್ತರ ಸಮೀಕ್ಷೆಗಳು ಊಹಿಸಿದ್ದಂತೆ ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳುವುದು ಸ್ಪಷ್ಟವಾಗಿದೆ. ಮಹಿಳಾ ಮತದಾರರು ಭಾರೀ ಪ್ರಮಾಣದಲ್ಲಿ ಮತದಾನ ಮಾಡಿದ್ದು ಚುನಾವಣೆಯನ್ನು ಎನ್‌ಡಿಎ ಪರವಾಗಿ ತಿರುಗಿಸಿರುವ ಪ್ರಮುಖ ಅಂಶಗಳಲ್ಲೊಂದಾಗಿದೆ.

1.5 ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮೆ ಮಾಡುವ ಮಹತ್ವದ ಹಣಕಾಸು ಬೆಂಬಲ ಯೋಜನೆಯನ್ನು ಎನ್‌ಡಿಎ ಪ್ರಕಟಿಸಿದ ಬಳಿಕ 2.5 ಕೋಟಿಗೂ ಅಧಿಕ ಮಹಿಳೆಯರು ಮತಗಳನ್ನು ಚಲಾಯಿಸುವ ಮೂಲಕ ಪುರುಷರನ್ನು ಹಿಂದಿಕ್ಕಿದ್ದರು.

2025ರ ಚುನಾವಣೆಯಲ್ಲಿ ಮಹಿಳೆಯರು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಶೇ.71.78ರಷ್ಟು ಮಹಿಳೆಯರು ಮತದಾನ ಮಾಡಿದ್ದರೆ ಕೇವಲ ಶೇ.62.98ರಷ್ಟು ಪುರುಷರು ಮತ ಚಲಾಯಿಸಿದ್ದಾರೆ. ಏಳು ಜಿಲ್ಲೆಗಳಲ್ಲಿ ಪುರುಷರಿಗಿಂತ ಶೇ.14ಕ್ಕೂ ಅಧಿಕ ಮಹಿಳೆಯರು ಮತಗಳನ್ನು ಚಲಾಯಿಸಿದ್ದರೆ ಇತರ 10 ಜಿಲ್ಲೆಗಳಲ್ಲಿ ಇದು ಶೇ.10ರಷ್ಟಿದೆ. ಪಾಟ್ನಾದಲ್ಲಿ ಮಾತ್ರ ಮಹಿಳೆಯರಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮತ ಚಲಾಯಿಸಿದ್ದಾರೆ.

ಹಿಂದಿನ ಆರ್‌ಜೆಡಿ ಸರಕಾರಗಳ ಆಡಳಿತದ ‘ಜಂಗಲ್ ರಾಜ್’ ಮರಳುವ ಬಗ್ಗೆ ಕಳವಳಗಳನ್ನು ಪ್ರಮುಖವಾಗಿ ವ್ಯಕ್ತಪಡಿಸುವುದರೊಂದಿಗೆ ಎನ್‌ಡಿಎ ಘೋಷಿಸಿದ್ದ ಆರ್ಥಿಕ ಪ್ರೋತ್ಸಾಹಗಳ ಭರವಸೆಗಳು ಮಹಿಳಾ ಮತದಾರರನ್ನು ಹೆಚ್ಚು ಆಕರ್ಷಿಸಿದಂತೆ ಕಂಡು ಬರುತ್ತಿದೆ.

ರಾಜ್ಯದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಮನವೊಲಿಸುವಲ್ಲಿ ಆರ್‌ಜೆಡಿ ವಿಫಲಗೊಂಡಿದ್ದು,ಹಿಂದಿನ ಆರ್‌ಜೆಡಿ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಹಾಗೂ ಮಹಿಳೆಯರ ಸುರಕ್ಷತೆಯ ಮೇಲೆ ಬೀರಿದ್ದ ಪರಿಣಾಮಗಳನ್ನು ಎನ್‌ಡಿಎ ಪದೇ ಪದೇ ನೆನಪಿಸಿತ್ತು.

ಈ ಬೆಳವಣಿಗೆಗಳ ನಡುವೆ 2020ರಲ್ಲಿ ಉತ್ತಮ ಪ್ರದರ್ಶನ ನೀಡಿರದಿದ್ದ ಜೆಡಿಯು ಮಹತ್ವದ ಮುನ್ನಡೆಯನ್ನು ಸಾಧಿಸಿದ್ದು,ಎನ್‌ಡಿಎ ಮೈತ್ರಿಕೂಟದಲ್ಲಿ ಬಲವಾದ ಶಕ್ತಿಯಾಗಿ ಹೊರಹೊಮ್ಮಿದೆ. ಆರ್‌ಜೆಡಿ ಕೇವಲ 27 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು,ನಾಲ್ಕು ಸ್ಥಾನಗಳಲ್ಲಿ ಮುನ್ನಡೆಯಲ್ಲಿರುವ ಕಾಂಗ್ರೆಸ್ ರಾಜ್ಯದಲ್ಲಿ ಅವನತಿಯತ್ತ ಸಾಗುತ್ತಿದೆ.

ಬಹಳ ಹಿಂದಿನಿಂದಲೂ ಬಿಹಾರದ 13.07 ಕೋಟಿ ಜನಸಂಖ್ಯೆಯಲ್ಲಿ ಶೇ.36ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ಅತ್ಯಂತ ಹಿಂದುಳಿದ ವರ್ಗಗಳ (ಇಬಿಸಿ) ಜೊತೆಗೆ ಮಹಿಳಾ ಮತದಾರರು ಜೆಡಿಯು ಒಕ್ಕೂಟಕ್ಕೆ ಪ್ರಮುಖ ಆಧಾರವಾಗಿದ್ದಾರೆ. ಇಬಿಸಿಗೆ ಸೇರಿರುವ ನಿತೀಶ ಕುಮಾರ ಅವರ ಸ್ವಂತ ಕುರ್ಮಿ ಸಮುದಾಯವು ಶೇ.3ರಷ್ಟು ಜನಸಂಖ್ಯೆ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News