ಬಿಹಾರ | ಪ್ರಧಾನಿ ಮೋದಿಯ ಚುನಾವಣಾ ಪ್ರಚಾರ ಸಮಾವೇಶಗಳಿಂದ ನಿತೀಶ್ ಕುಮಾರ್ ಕಾಣೆಯಾಗಿರುವುದೇಕೆ?; ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ...
File Photo: PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಚುನಾವಣಾ ಪ್ರಚಾರ ಸಮಾವೇಶಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗುತ್ತಿದ್ದು, ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಪಕ್ಷಗಳ ಆರೋಪಗಳನ್ನು ಸೋಮವಾರ ಬಿಹಾರ ಬಿಜೆಪಿ ಸಮನ್ವಯಕಾರ ಧರ್ಮೇಂದ್ರ ಪ್ರಧಾನ್ ತಳ್ಳಿ ಹಾಕಿದ್ದಾರೆ.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಧರ್ಮೇಂದ್ರ ಪ್ರಧಾನ್, ಪ್ರತಿಯೊಬ್ಬ ನಾಯಕನೂ ವೈಯಕ್ತಿಕವಾಗಿ ಚುನಾವಣಾ ಪ್ರಚಾರ ನಡೆಸಬೇಕು ಎಂಬುದು ಎನ್‌ಡಿಎ ಯೋಜನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಹಾರ ಸರಕಾರದ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ 7-8 ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಕ್ಟೋಬರ್ 24ರಂದು ಸಮಷ್ಟಿಪುರ ಜಿಲ್ಲೆಯ ಜನನಾಯಕ ಕರ್ಪೂರಿ ಠಾಕೂರ್ ಅವರ ಸ್ವಗ್ರಾಮದಿಂದ ಪ್ರಾರಂಭಗೊಂಡ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪೇಂದ್ರ ಕುಶ್ವಾಹ ಹಾಗೂ ಚಿರಾಗ್ ಪಾಸ್ವಾನ್ ಸೇರಿದಂತೆ ಎಲ್ಲ ಎನ್‌ಡಿಎ ನಾಯಕರು ಭಾಗವಹಿಸಿದ್ದರು” ಎಂದು ಅವರು ಹೇಳಿದ್ದಾರೆ.
“ಇದು ನಮ್ಮ ಯೋಜನೆಯ ಭಾಗವಾಗಿದೆ. ಎಲ್ಲ ನಾಯಕರೂ ವೈಯಕ್ತಿಕವಾಗಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ನಾವು ತೀರ್ಮಾನಿಸಿದ್ದೇವೆ” ಎಂದೂ ಅವರು ತಿಳಿಸಿದ್ದಾರೆ.
ಪಾಟ್ನಾದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿಯ ರೋಡ್ ಶೋ ಹಾಗೂ ಬಿಹಾರದ ಇನ್ನಿತರ ಸ್ಥಳಗಳಲ್ಲಿನ ಅವರ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗುತ್ತಿರುವ ಕುರಿತು ಕಾಂಗ್ರೆಸ್ ಎತ್ತಿದ್ದ ಪ್ರಶ್ನೆಗೆ ಪ್ರತಿಯಾಗಿ ಅವರಿಂದ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.
ನಿತೀಶ್ ಕುಮಾರ್ ಅವರನ್ನು ಬಿಜೆಪಿ ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂದೂ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು.