ಬಿಹಾರ | ಮಹಿಳಾ ರೋಜ್‌ಗಾರ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ 1 ಸಾವಿರ ಕೋಟಿ ರೂ. ಬಿಡುಗಡೆ
ಸ್ವಉದ್ಯೋಗಕ್ಕಾಗಿ ಪ್ರತಿ ಮಹಿಳೆಗೆ ತಲಾ 10 ಸಾವಿರ ರೂ. ವಿತರಣೆ
ನಿತೀಶ್ ಕುಮಾರ್ | Photo Credit : PTI
ಪಾಟ್ನಾ,ನ.28: ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಯ 10 ಲಕ್ಷ ಫಲಾನುಭವಿಗಳಿಗೆ ಒಟ್ಟು 1 ಸಾವಿರ ಕೋಟಿ ರೂ.ಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ವಿತರಿಸಿದರು. ರಾಜ್ಯದ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಸತತ ಐದನೇ ಅವಧಿಗೆ ಅಧಿಕಾರಕ್ಕೆ ಮರಳಿರುವ ನಿತೀಶ್ ಕುಮಾರ್ ಅವರು ಪ್ರತಿಯೋರ್ವ ಫಲಾನುಭವಿ ಮಹಿಳೆಗೆ ಡಿಬಿಟಿ (ಬ್ಯಾಂಕ್‌ಗೆ ನೇರವಾಗಿ ವರ್ಗಾವಣೆ) ವ್ಯವಸ್ಥೆಯ ಮೂಲಕ 10 ಸಾವಿರ ರೂ. ಬಿಡುಗಡೆಗೊಳಿಸಿದ್ದಾರೆ. ಪಾಟ್ನಾದಲ್ಲಿರುವ ತನ್ನ ಅಧಿಕೃತ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹಣವನ್ನು ವಿತರಿಸಿದ್ದಾರೆ ನೂತನ ಸಂಪುಟದ ಸಚಿವರು ಹಾಗೂ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
‘‘ಫಲಾನುಭವಿಗಳು ಈ ಹಣವನ್ನು ಸ್ವದ್ಯೋಗಕ್ಕಾಗಿ ಬಳಸುವುದಕೆ ಉತ್ತೇಜಿಸಲಾಗುವುದು. ಸ್ವದ್ಯೋಗಕ್ಕಾಗಿ ತಾವು ಹಣ ಬಳಸಿರುವುದನ್ನು ತೋರಿಸಿಕೊಟ್ಟ ಮಹಿಳೆಯರು ಇನ್ನೂ ತಲಾ ಎರಡು ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ ಎಂದರು.
ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಗೆ ಒಂದು ತಿಂಗಳು ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ ನಲ್ಲಿ ನಿತೀಶ್ ಸರಕಾರ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಪಾಟ್ನಾದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಚುನಾವಣೆಗೆ ಮುಂಚಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದರಿಂದ, ಚುನಾವಣಾ ದಿನಾಂಕ ಪ್ರಕಟವಾದ ಬಳಿಕವೂ ತಂಡಗಳಾಗಿ ಫಲಾನುಭವಿಗಳಿಗೆ ಹಣ ವಿತರಣೆ ಪ್ರಕ್ರಿಯೆ ಮುಂದುವರಿದಿತ್ತು. ಎನ್‌ಡಿಎ ಸರಕಾರದ ಈ ನಡೆಯನ್ನುತೀವ್ರವಾಗಿ ಖಂಡಿಸಿರವುವ ಪ್ರತಿಪಕ್ಷಗಳು, ನಿತೀಶ್ ನೇತೃತ್ವದ ಬಿಜೆಪಿ-ಜೆಡಿಯು ಸರಕಾರವು ಮತಗನ್ನು ‘ಖರೀದಿಸಿದೆ’ ಎಂದು ಆರೋಪಿಸಿದ್ದವು
ಈ ಯೋಜನೆಯು ಆಡಳಿತಾರೂಢ ಎನ್‌ಡಿಎ ಸರಕಾರಕ್ಕೆ ಚುನಾವಣೆಯಲ್ಲಿ ಭಾರೀ ಲಾಭವನ್ನು ತಂದುಕೊಟ್ಟಿದ್ದು, ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.