×
Ad

ಬಿಹಾರ ಎಸ್‌ಐಆರ್: ಭಾರತೀಯ ಅಮೆರಿಕನ್ ಮುಸ್ಲಿಮ್ ಮಂಡಳಿಯ ಖಂಡನೆ

Update: 2025-07-23 20:51 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜು.24: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಗೆ ಚುನಾವಣಾ ಆಯೋಗದ ನಿರ್ದೇಶನವನ್ನು ಭಾರತೀಯ ಅಮೆರಿಕನ್ ಮುಸ್ಲಿಮ್ ಮಂಡಳಿ(ಐಎಎಂಸಿ)ಯು ಖಂಡಿಸಿದೆ.

ಲಕ್ಷಾಂತರ ಭಾರತೀಯರ ಮತದಾನದ ಹಕ್ಕುಗಳು ಮತ್ತು ಪೌರತ್ವ ಸ್ಥಾನಮಾನದ ಮೇಲೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಐಎಎಂಸಿ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿದೆ.

ವಾಷಿಂಗ್ಟನ್ ಡಿಸಿ ಮೂಲದ ಐಎಎಂಸಿ, ಚುನಾವಣಾ ಆಯೋಗದ ಈ ‘ಹಠಾತ್ ನಿರ್ದೇಶನ’ವು ಭಾರತದಲ್ಲಿ ಅತ್ಯಂತ ಜನನಿಬಿಡ ರಾಜ್ಯಗಳಲ್ಲೊಂದಾಗಿರುವ ಬಿಹಾರದಲ್ಲಿ ಲಕ್ಷಾಂತರ ಮತದಾರರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಿಗೆ ಬೆದರಿಕೆಯೊಡ್ಡಿರುವ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಆಕ್ಷೇಪಿಸಿದೆ.

ಕಡಿಮೆ ಸಮಯಾವಕಾಶ ಮತ್ತು ದಾಖಲಾತಿ ಅವಶ್ಯಕತೆಗಳು ಅನಗತ್ಯ ತೊಡಕುಗಳನ್ನು ಸೃಷ್ಟಿಸಿದ್ದು,ಇದು ವಿಶೇಷವಾಗಿ ರಾಜ್ಯದ ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಹಕ್ಕು ನಿರಾಕರಣೆಗೆ ಕಾರಣವಾಗಬಹುದು ಎಂದು ಐಎಎಂಸಿ ಅಧ್ಯಕ್ಷ ಮುಹಮ್ಮದ್ ಜವಾದ್ ಹೇಳಿದ್ದಾರೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು ಆಡಳಿತಾತ್ಮಕ ಸುಧಾರಣೆಯ ಸೋಗಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು,ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಾರತಮ್ಯದ ವ್ಯಾಪಕ ಹುನ್ನಾರದ ಭಾಗವೆಂದು ಐಎಎಂಸಿ ಪರಿಗಣಿಸಿದೆ.

ಭಾರತ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯ ಎಸ್‌ಐಆರ್ ಅಗತ್ಯವನ್ನು ತಕ್ಷಣ ಪುನರ್‌ಪರಿಶೀಲಿಸಬೇಕು ಮತ್ತು ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಐಎಎಂಸಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಕಳವಳಗಳನ್ನು ನಿವಾರಿಸುವಂತೆ ಅಮೆರಿಕ ಸರಕಾರವನ್ನೂ ಒತ್ತಾಯಿಸಿದೆ. ಪರಿಸ್ಥಿತಿಯ ಮೇಲೆ ನಿಗಾಯಿರಿಸುವಂತೆ ಹಾಗೂ ಮತದಾನ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಗೆ ಪ್ರತಿಪಾದಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೂ ಅದು ಕರೆ ನೀಡಿದೆ.

ಆರ್ಥಿಕ ಸ್ಥಿತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲ ಪ್ರಜೆಗಳ ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯನ್ನು ರಕ್ಷಿಸಲು ಪಾರದರ್ಶಕ,ಸಮಾನ ಚುನಾವಣಾ ಪ್ರಕ್ರಿಯೆಗಳ ಅಗತ್ಯವನ್ನು ಐಎಎಂಸಿ ಒತ್ತಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News