×
Ad

ಬಿಹಾರ ಎಸ್‌ಐಆರ್ | ಮೊದಲ ಹಂತ ಮುಕ್ತಾಯ: ಕರಡು ಪಟ್ಟಿಯಿಂದ 65.2 ಲಕ್ಷ ಮತದಾರರನ್ನು ಕೈಬಿಡುವ ಸಾಧ್ಯತೆ

Update: 2025-07-26 20:46 IST

 ಸಾಂದರ್ಭಿಕ ಚಿತ್ರ | PTI

 

ಪಾಟ್ನಾ,ಜು.26: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ಮೊದಲ ಹಂತವು ಮುಕ್ತಾಯಗೊಂಡಿದ್ದು,65.2 ಲಕ್ಷ ಮತದಾರರನ್ನು ಕೈಬಿಡುವ ಸಾಧ್ಯತೆಯಿದೆ.

ಎಣಿಕೆ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ ಚುನಾವಣಾ ಆಯೋಗವು ಬಿಡುಗಡೆಗೊಳಿಸಿದ ದತ್ತಾಂಶಗಳಂತೆ ಈ 65.2 ಲಕ್ಷ ಮತದಾರರಲ್ಲಿ 22 ಲಕ್ಷ ಜನರು ಮೃತಪಟ್ಟಿದ್ದಾರೆ, 35 ಲಕ್ಷ ಜನರು ಶಾಶ್ವತವಾಗಿ ಬಿಹಾರದಿಂದ ಹೊರಗೆ ಸ್ಥಳಾಂತರಗೊಂಡಿದ್ದಾರೆ,ಏಳು ಲಕ್ಷ ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು 1.2 ಲಕ್ಷ ಜನರು ಇನ್ನೂ ತಮ್ಮ ಫಾರ್ಮ್‌ಗಳನ್ನು ಸಲ್ಲಿಸಬೇಕಿದೆ.

ಜೂ.24ರಂದು ರಾಜ್ಯದಲ್ಲಿ ಆರಂಭಗೊಂಡಿದ್ದ ಎಸ್‌ಐಆರ್ ಬಿಹಾರದ ಶೇ.99.8ರಷ್ಟು ಮತದಾರರನ್ನು ಒಳಗೊಂಡಿತ್ತು ಎಂದು ಹೇಳಿರುವ ಚುನಾವಣಾ ಆಯೋಗವು,7.9 ಕೋ.ಮತದಾರರ ಪೈಕಿ 7.23 ಕೋ.ಮತದಾರರ ಎಣಿಕೆ ನಮೂನೆಗಳನ್ನು ಸ್ವೀಕರಿಸಲಾಗಿದ್ದು, ಡಿಜಿಟಲೀಕರಣಗೊಂಡಿವೆ. ಅವರ ಹೆಸರುಗಳನ್ನು ಆ.1ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದೆ.

ಉಳಿದ 1.2 ಲಕ್ಷ ಮತದಾರರಿಂದ ಎಣಿಕೆ ನಮೂನೆಗಳನ್ನು ಇನ್ನಷ್ಟೇ ಸ್ವೀಕರಿಸಬೇಕಿದೆ. ಬಿಎಲ್‌ಒ ವರದಿಗಳೊಂದಿಗೆ ಉಳಿದ ಮತದಾರರ ಎಣಿಕೆ ನಮೂನೆಗಳ ಡಿಜಿಟಲೀಕರಣವನ್ನೂ ಆ.1ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಆಯೋಗವು ಹೇಳಿದೆ.

ಹೆಸರುಗಳು ಬಿಟ್ಟು ಹೋಗಿರುವ ಅರ್ಹ ಮತದಾರರನ್ನು ಆ.1 ಮತ್ತು ಸೆ.1ರ ನಡುವೆ ನಡೆಯಲಿರುವ ಎಸ್‌ಐಆರ್‌ ನ ಮುಂದಿನ ಹಂತದಲ್ಲಿ ನಿಗದಿತ ನಮೂನೆಗಳನ್ನು ಸಲ್ಲಿಸಿದ ಬಳಿಕ ಸೇರಿಸಲಾಗುವುದು ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಪಕ್ಷಗಳೂ ಚುನಾವಣಾ ನೋಂದಣಾಧಿಕಾರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಆಯೋಗವು ತಿಳಿಸಿದೆ.

ತಮ್ಮ ಎಣಿಕೆ ನಮೂನೆಗಳನ್ನು ಸಲ್ಲಿಸದ, ಮೃತಪಟ್ಟಿರುವ ಮತ್ತು ಶಾಶ್ವತವಾಗಿ ಸ್ಥಳಾತರಗೊಂಡಿರುವ ಮತದಾರರ ಪಟ್ಟಿಗಳನ್ನು 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಈಗಾಗಲೇ ಹಂಚಿಕೊಳ್ಳಲಾಗಿದೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಆ.1ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಗಳಲ್ಲಿ ದೋಷಗಳೇನಾದರೂ ಇದ್ದರೆ ಸರಿಪಡಿಸಲು ರಾಜಕೀಯ ಪಕ್ಷಗಳು ಒಟ್ಟು 1,60,813 ಬೂತ್ ಮಟ್ಟದ ಏಜೆಂಟ್‌ಗಳನ್ನು ನಾಮನಿರ್ದೇಶನಗೊಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News