ಹರಿಯಾಣ | ತುಂಡಾದ ತೋಳಿನೊಂದಿಗೆ 150 ಕಿ.ಮೀ. ನಡೆದ ಬಿಹಾರದ ಬಾಲಕ!
ಕ್ರೂರ ಜೀತಪದ್ಧತಿ ಬಹಿರಂಗ; ಬದುಕಿತು ಬಡಜೀವ
ಸಾಂದರ್ಭಿಕ ಚಿತ್ರ | NDTV
ಪಾಟ್ನಾ,ಆ.10: ಜೀತಪದ್ಧತಿಯಿಂದ ಬದುಕುಳಿದ 15ರ ಹರೆಯದ ಬಾಲಕನೋರ್ವ ಗಂಭೀರ ಸ್ಥಿತಿಯಲ್ಲಿ ರೋಹ್ಟಕ್ ನ ಪಿಜಿಐ ಟ್ರಾಮಾ ಸೆಂಟರ್ ನಲ್ಲಿ ದಾಖಲಾಗಿದ್ದು, ಆತ ಅನುಭವಿಸಿದ್ದ ಭೀಕರ ಸಂಕಷ್ಟ ಆತನನ್ನು ರಕ್ಷಿಸಿದವರಿಗೂ ಆಘಾತವನ್ನುಂಟು ಮಾಡಿದೆ.
‘ನನ್ನ ಸೋದರನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾನೆ. ನಾವು ತೀವ್ರ ಹಣಕಾಸು ತೊಂದರೆ ಎದುರಿಸುತ್ತಿದ್ದೇವೆ’ ಎಂದು ಶನಿವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಾಲಕನ ಸೋದರ ಜಿತೇಂದ್ರ ತಿಳಿಸಿದ್ದಾರೆ.
ಬಾಲಕ ಜು.29ರಂದು ಹರ್ಯಾಣದ ನುಹ್ ನ ಬೀದಿಗಳಲ್ಲಿ ಅಲೆಯುತ್ತಿದ್ದ. ತೀವ್ರ ದಣಿದಿದ್ದ ಆತ ಕೇವಲ ಒಳಚಡ್ಡಿಯನ್ನು ಧರಿಸಿದ್ದು, ಆತನ ಎಡತೋಳು ಕತ್ತರಿಸಲ್ಪಟ್ಟಿತ್ತು. ಅದಕ್ಕೆ ಒರಟಾಗಿ ಬ್ಯಾಂಡೇಜ್ ಸುತ್ತಲಾಗಿತ್ತು. ಬಿಹಾರಕ್ಕೆ ಮರಳುವ ಪ್ರಯತ್ನದಲ್ಲಿ ಆತ 22 ಗಂಟೆಗಳಿಗೂ ಅಧಿಕ ಸಮಯ ನಡೆದಿದ್ದ. ಈ ವೇಳೆ ಸರಕಾರಿ ಶಾಲಾ ಶಿಕ್ಷಕರಾದ ಅರವಿಂದ್ ಕುಮಾರ್ ಮತ್ತು ರಾಕೇಶ್ ಕುಮಾರ್ ಅವರ ಕಣ್ಣಿಗೆ ಈ ಬಾಲಕ ಬಿದ್ದಿದ್ದ.
‘ಬಾಲಕ ಹುಚ್ಚನಂತೆ ಕಾಣುತ್ತಿದ್ದ. ನಾನು ಕಾರನ್ನು ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದೆ. ಬಿಹಾರಕ್ಕೆ ಹೋಗುತ್ತಿದ್ದೇನೆ ಎಂದು ಆತ ಉತ್ತರಿಸಿದ್ದ. ಬಿಹಾರ ಹಲವಾರು ಕಿ.ಮೀ.ದೂರವಿದ್ದರಿಂದ ನಾವು ಆಘಾತಗೊಂಡಿದ್ದೆವುಹ ನಮ್ಮೊಂದಿಗೆ ಬರುವಂತೆ ಅತನಿಗೆ ಸೂಚಿಸಿದ್ದೆವು’ ಎಂದು ಅರವಿಂದ್ ಹೇಳಿದರು.
ಶಿಕ್ಷಕರು ಬಾಲಕನಿಗೆ ಆಹಾರ ಮತ್ತು ನೀರನ್ನು ಕೊಟ್ಟು ಬಳಿಕ ಸಮೀಪದ ಪೋಲಿಸ್ ಠಾಣೆಗೆ ಕರೆದೊಯ್ದಿದ್ದರು.
ಪೋಲಿಸರ ಪ್ರಕಾರ ಬಿಹಾರದ ಕಿಶನ್ ಗಂಜ್ ಮೂಲದ ಬಾಲಕನನ್ನು ಹರ್ಯಾಣದ ಜಿಂದ್ ಜಿಲ್ಲೆಯ ಡೇರಿಯೊಂದರಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಬಹಾದೂರಗಡ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೋರ್ವ ಮಾಸಿಕ 10,000 ರೂ.ಉದ್ಯೋಗದ ಆಮಿಷವನ್ನು ಆತನಿಗೆ ಒಡ್ಡಿದ್ದ. ಒಮ್ಮೆ ಡೇರಿಗೆ ಸೇರಿದ ಬಳಿಕ ಆತನಿಗೆ ವೇತನವನ್ನು ನಿರಾಕರಿಸಲಾಗಿತ್ತು. ತಿನ್ನಲು ಸ್ವಲ್ಪವೇ ಆಹಾರ ನೀಡಲಾಗುತ್ತಿತ್ತು. ಕೋಣೆಯೊಂದಕ್ಕೆ ಆತನನ್ನು ಸೀಮಿತಗೊಳಿಸಲಾಗಿತ್ತು.
ಬಾಲಕನ ಕೆಲಸಗಳಲ್ಲಿ ಯಂತ್ರದಿಂದ ಮೇವು ಕತ್ತರಿಸುವುದೂ ಸೇರಿತ್ತು. ಅದೊಂದು ದಿನ ಆಕಸ್ಮಿಕವಾಗಿ ಆತನ ಎಡತೋಳು ಯಂತ್ರಕ್ಕೆ ಸಿಲುಕಿ ಕತ್ತರಿಸಲ್ಪಟ್ಟಿತ್ತು. ಡೇರಿಯ ಮಾಲಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಸ್ಥಳೀಯ ಔಷಧಾಲಯದಲ್ಲಿ ಚಿಕಿತ್ಸೆ ಕೊಡಿಸಿ ಗಾಯಕ್ಕೆ ಬ್ಯಾಂಡೇಜ್ ಹಾಕಿಸಿದ್ದ. ಆತನಿಗೆ ಔಷಧಿಗಳನ್ನು ನೀಡಲಾಗಿದ್ದು, ಅದನ್ನು ಸೇವಿಸಿದ ಬಳಿಕ ಬಾಲಕ ಮೂರು ದಿನಗಳ ಕಾಲ ಪ್ರಜ್ಞಾಹೀನನಾಗಿದ್ದ.
ಬಾಲಕನಿಗೆ ಎಚ್ಚರವಾದಾಗ ಆತನಿಗೆ ನೀಡಲಾಗಿದ್ದ ಸ್ವಲ್ಪ ಹಣವೂ ಮಾಯವಾಗಿತ್ತು. ಆತನನ್ನು ವಾಹನದಲ್ಲಿ ಕರೆದೊಯ್ದು ಅಪರಿಚಿತ ತಾಣದಲ್ಲಿ ಬಿಡಲಾಗಿತ್ತು. ಅಲ್ಲಿಂದ ಬಾಲಕ ಬಿಹಾರದತ್ತ ನಡೆಯಲು ಪ್ರಾರಂಭಿಸಿದ್ದ.
ಗಾಯ ಸುಮಾರು 14 ದಿನಗಳಷ್ಟು ಹಳೆಯದು ಎಂದು ವೈದ್ಯರು ಅಂದಾಜಿಸಿದ್ದಾರೆ. ನೋವು ಮತ್ತು ಆಘಾತದಿಂದಾಗಿ ಬಾಲಕನಿಗೆ ತನ್ನನ್ನಿರಿಸಲಾಗಿದ್ದ ಸ್ಥಳದ ವಿಳಾಸ, ಡೇರಿಯ ಮಾಲಿಕನ ಹೆಸರು ಅಥವಾ ತನ್ನ ಹೆತ್ತವರ ಫೋನ್ ನಂಬರ್ ಗಳೂ ನೆನಪಿಲ್ಲ ಎಂದು ಸದರ್ ನುಹ್ ಪೋಲಿಸ್ ಠಾಣೆಯ ಎಎಸ್ಐ ಕಮಲ್ ಸಿಂಗ್ ತಿಳಿಸಿದರು.
ಗಂಟೆಗಳ ಪ್ರಯತ್ನದ ಬಳಿಕ ಸಿಂಗ್ ಕಿಶನಗಂಜ್ ಎಸ್ಪಿಯನ್ನು ಸಂಪರ್ಕಿಸಿದ್ದರು. ಅವರು ಬಾಲಕನ ಕುಟುಂಬವನ್ನು ಪತ್ತೆ ಹಚ್ಚುವಂತೆ ಸ್ಥಳೀಯ ಠಾಣಾಧಿಕಾರಿಗೆ ತಿಳಿಸಿದ್ದರು. ಮಾಹಿತಿ ತಿಳಿದ ಬಾಲಕನ ಸೋದರ ಜಿತೇಂದ್ರ ನುಹ್ ಪೋಲಿಸ್ ಠಾಣೆಗೆ ಆಗಮಿಸಿದ್ದಾರೆ.
ಕಡು ಬಡತನದಲ್ಲಿರುವ ಬಾಲಕನ ಕುಟುಂಬ ಪ್ರಕರಣವನ್ನು ದಾಖಲಿಸಲು ಹಿಂಜರಿದಿದ್ದರಿಂದ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.