ಕೇರಳದ ಅಲಪ್ಪುಳದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರ

Update: 2024-04-18 14:48 GMT

Image Source :Pexels

ಅಲಪ್ಪುಳ: ಅಲಪ್ಪುಳ ಜಿಲ್ಲೆಯ ಎರಡು ಸ್ಥಳಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ವರದಿಯಾಗಿದೆ ಎಂದು ಅಧಿಕಾರಿಗಳು ಗುರುವಾರ ಇಲ್ಲಿ ತಿಳಿಸಿದರು.

ಎಡತ್ವಾ ಗ್ರಾಮ ಪಂಚಾಯತ್‌ನ ವಾರ್ಡ್ ಸಂಖ್ಯೆ 1ರಲ್ಲಿಯ ಒಂದು ಪ್ರದೇಶ ಮತ್ತು ಚೆರುತ್ತನ ಗ್ರಾಮ ಪಂಚಾಯತ್‌ನ ವಾರ್ಡ್ ಸಂಖ್ಯೆ 3ರಲ್ಲಿಯ ಇನ್ನೊಂದು ಪ್ರದೇಶದಲ್ಲಿ ಸಾಕಿರುವ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿದ್ದ ಬಾತುಕೋಳಿಗಳ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲದ ಪ್ರಯೋಗಶಾಲೆಗೆ ಕಳುಹಿಸಲಾಗಿದ್ದು,ಏವಿಯನ್ ಇನ್‌ಫ್ಲುಯೆಂಝಾ (ಎಚ್‌5ಎನ್‌1) ಇರುವುದು ದೃಢಪಟ್ಟಿದೆ ಎಂದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಭಾರತ ಸರಕಾರದ ಕ್ರಿಯಾ ಯೋಜನೆಗೆ ಅನುಗುಣವಾಗಿ ಹಕ್ಕಿ ಜ್ವರದ ಕೇಂದ್ರಬಿಂದುವಿನಿಂದ ಒಂದು ಕಿ.ಮೀ.ವಿಸ್ತೀರ್ಣದಲ್ಲಿರುವ ಸಾಕು ಬಾತುಕೋಳಿಗಳನ್ನು ಕೊಂದು ನಾಶಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಿದೆ.

ಪಶು ಕಲ್ಯಾಣ ಇಲಾಖೆಯು ಸಾಧ್ಯವಾದಷ್ಟು ಶೀಘ್ರ ಕ್ಷಿಪ್ರ ಕ್ರಿಯಾ ಪಡೆಯನ್ನು ರಚಿಸಲಿದೆ ಮತ್ತು ಸಂಬಂಧಿತ ಸಿದ್ಧತೆಗಳನ್ನು ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹಕ್ಕಿ ಜ್ವರವು ಮನುಷ್ಯರಿಗೆ ಹರಡುವ ಸಾಧ್ಯತೆಯಿಲ್ಲ,ಹೀಗಾಗಿ ಅನಗತ್ಯವಾಗಿ ಭೀತಿ ಪಡಬೇಕಿಲ್ಲ ಎಂದು ಜಿಲ್ಲಾಡಳಿತವು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News