×
Ad

ಸಿದ್ದರಾಮಯ್ಯರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಬಹುದಲ್ಲವೇ?: ಸಿಎಂಗೆ ಬಿಜೆಪಿ ಪ್ರಶ್ನೆ

Update: 2025-05-06 18:06 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನಪರ, ಬಡವರ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, ಮದ್ಯಪಾನವನ್ನೇ ಸಂಪೂರ್ಣವಾಗಿ ನಿಷೇಧಿಸಬಹುದಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಸಿದ್ದರಾಮಯ್ಯ ಅವರು ಮದ್ಯದ ಮೇಲಿನ ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ, ‘ಮದ್ಯದ ದುಶ್ಚಟದಿಂದ ಜನರನ್ನು ವಿಮುಖರನ್ನಾಗಿಸಲು ಬೆಲೆ ಏರಿಕೆ ಮಾಡಿದ್ದೇವೆ’ ಎನ್ನುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕಂಗೆಟ್ಟಿರುವ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಸಿದ್ದರಾಮಯ್ಯ ಸರಕಾರ ಅಬಕಾರಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದೆ.

ಮದ್ಯದ ಮೇಲೆ ವಿಪರೀತವಾಗಿ ಸುಂಕ ವಿಧಿಸುವ ಮೂಲಕ ಕಾಂಗ್ರೆಸ್ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಮದ್ಯದ ದರ ಏರಿಕೆಯಿಂದಾಗಿ ಬೆಲೆ ಕೇಳಿಯೇ ಬಡವರ್ಗದ ಮದ್ಯಪ್ರಿಯರು ಅಮಲಿಗೊಳಗಾಗುತ್ತಿದ್ದಾರೆ. ಗೋವಾ ರಾಜ್ಯದಲ್ಲಿ 100 ರೂ.ಗೆ ಸಿಗುವ ಮದ್ಯಕ್ಕೆ ಕರ್ನಾಟಕದಲ್ಲಿ 305 ರೂ.ವಿಧಿಸಲಾಗುತ್ತಿದೆ.

ಮದ್ಯದ ಮೇಲೆ ಶೇ.80ರಷ್ಟು ತೆರಿಗೆ ವಿಧಿಸುವ ಮೂಲಕ ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸುವ ರಾಜ್ಯ ಎಂಬ ಕುಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿರಿಸಲು ಅತೀ ಹೆಚ್ಚು ತೆರಿಗೆ ವಿಧಿಸಿದ್ದೇ ಹೊರತು ಇದು ಯಾವುದೇ ಜನಪರ ಕಾಳಜಿಯಿಂದಲ್ಲ ಎಂದು ಬಿಜೆಪಿ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News