ಮುಸ್ಲಿಮ್ ಯುವತಿಯರನ್ನು ‘ಅಪಹರಿಸುವಂತೆ’ ಹಿಂದೂ ಯುವಕರಿಗೆ ಬಿಜೆಪಿ ನಾಯಕನ ಸೂಚನೆ
ಉದ್ಯೋಗ, ಭದ್ರತೆಯ ಭರವಸೆ
ರಾಘವೇಂದ್ರ ಪ್ರತಾಪ ಸಿಂಗ್ | Photo Credit : Raghvendra Pratap Singh via Facebook
ಲಕ್ನೋ: ಬಿಜೆಪಿಯ ಮಾಜಿ ಶಾಸಕ ಹಾಗೂ ಹಿರಿಯ ನಾಯಕ ರಾಘವೇಂದ್ರ ಪ್ರತಾಪ ಸಿಂಗ್ ಅವರು ಮುಸ್ಲಿಮ್ ಯುವತಿಯರನ್ನು ಅಪಹರಿಸಿ ಮದುವೆಯಾಗುವಂತೆ ಹಿಂದೂ ಯುವಕರಿಗೆ ಬಹಿರಂಗವಾಗಿ ಕರೆ ನೀಡಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ಮದುವೆಯ ವೆಚ್ಚವನ್ನು ತಾನೇ ಭರಿಸುವುದಾಗಿ ಹಾಗೂ ಉದ್ಯೋಗಗಳನ್ನು ಮತ್ತು ಭದ್ರತೆಯನ್ನು ಒದಗಿಸುವುದಾಗಿಯೂ ಸಿಂಗ್ ಹಿಂದು ಯುವಕರಿಗೆ ಭರವಸೆಯನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಉತ್ತರ ಪ್ರದೇಶದ ಸಿದ್ಧಾರ್ಥ ನಗರ ಜಿಲ್ಲೆಯ ದುಮಾರಿಯಾಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸಿಂಗ್ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ನಾನು ಹೇಳುತ್ತಿದ್ದೇನೆ. ಪ್ರತಿ ಇಬ್ಬರು ಹಿಂದು ಯುವತಿಯರಿಗೆ ಬದಲಾಗಿ ಹತ್ತು ಮುಸ್ಲಿಮ್ ಯುವತಿಯರನ್ನು ಅಪಹರಿಸಿ, ಅವರನ್ನು ಹಿಂದು ಧರ್ಮಕ್ಕೆ ಮತಾಂತರಿಸಿ. ನಾನು ನಿಮ್ಮನ್ನು ಅವರೊಂದಿಗೆ ಮದುವೆ ಮಾಡಿಸುತ್ತೇನೆ ಮತ್ತು ಅವರಿಗೆ ಉದ್ಯೋಗಗಳನ್ನೂ ಒದಗಿಸುತ್ತೇನೆ’ ಎಂದು ಸಿಂಗ್ ಸಭೆಯಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ದುಮಾರಿಯಾಗಂಜ್‌ನಲ್ಲಿ ಇಬ್ಬರು ಹಿಂದು ಯುವತಿಯರು ಇಸ್ಲಾಮ್‌ಗೆ ಮತಾಂತರಗೊಂಡಿದ್ದಾರೆ ಎಂದು ಹೇಳಿರುವ ಸಿಂಗ್, ‘ನಾವು ಇದನ್ನು ಅನುಮತಿಸಲು ಸಾಧ್ಯವಿಲ್ಲ, ಪ್ರತಿ ಇಬ್ಬರು ಹಿಂದೂ ಯುವತಿಯರಿಗೆ ಬದಲಾಗಿ ನಾವು ಹತ್ತು ಮುಸ್ಲಿಮ್ ಯುವತಿಯರನ್ನು ಬಯಸುತ್ತೇವೆ’ ಎಂದಿದ್ದಾರೆ.
‘ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿಕೊಂಡಿದ್ದ ಸಮಾಜವಾದಿ ಪಕ್ಷದ ಸರಕಾರ ರಾಜ್ಯದಲ್ಲಿಲ್ಲ. ಈಗ ನಾವು ಯೋಗಿ ಆದಿತ್ಯನಾಥರ ಸರಕಾರವನ್ನು ಹೊಂದಿದ್ದೇವೆ. ಚಿಂತಿಸುವ ಅಗತ್ಯವಿಲ್ಲ’ ಎಂದೂ ಸಿಂಗ್ ಹೇಳಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.
ತನ್ನ ಹೇಳಿಕೆಯನ್ನು ನಂತರ ಸಮರ್ಥಿಸಿಕೊಂಡಿರುವ ಸಿಂಗ್, ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳುವುದು ಕೇವಲ ಹಿಂದುಗಳ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ವೀಡಿಯೊದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲವಾದರೂ, ಸಿಂಗ್ ಹೇಳಿಕೆಗಳನ್ನು ನಾಚಿಕೆಗೇಡು ಎಂದು ಮಂಗಳವಾರ ಬಣ್ಣಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬಿಜೆಪಿ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಹರಡುತ್ತಿದೆ, ಸಮಾಜವನ್ನು ಒಡೆಯುತ್ತಿದೆ ಮತ್ತು ನಿರುದ್ಯೋಗಿ ಯುವಕರನ್ನು ಪ್ರಚೋದಿಸುತ್ತಿದೆ ಎಂದು ಮಾಯಾವತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.