×
Ad

ಅಧಿಕಾರದಲ್ಲಿ ಉಳಿಯಲು ಬಿಜೆಪಿ ಅನೈತಿಕತೆಯ ಯಾವುದೇ ಮಟ್ಟಕ್ಕೂ ಇಳಿಯುತ್ತದೆ: ಖರ್ಗೆ

Update: 2025-08-15 20:35 IST

ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ,ಆ.15: ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಅಧಿಕಾರದಲ್ಲಿ ಉಳಿಯಲು ಅನೈತಿಕತೆಯ ಯಾವುದೇ ಮಟ್ಟಕ್ಕೂ ಇಳಿಯಲು ಅದು ಸಿದ್ಧವಿದೆ ಮತ್ತು ದೇಶಾದ್ಯಂತ ಚುನಾವಣೆಗಳಲ್ಲಿ ಭಾರೀ ಪ್ರಮಾಣದ ಅಕ್ರಮಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಿದ್ದಾರೆ.

ಅವರು ಶುಕ್ರವಾರ ಇಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಭವನ ಮುಖ್ಯ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ಮೇಲೆ ಗಮನವನ್ನು ಕೇಂದ್ರೀಕರಿಸಿದ ಅವರು,ಜೀವಂತ ಮತದಾರರನ್ನು ಮೃತರು ಎಂದು ಘೋಷಿಸಿರುವ ಪ್ರಕರಣಗಳು ಸೇರಿದಂತೆ ಭಾರೀ ಪ್ರಮಾಣದಲ್ಲಿ ಪ್ರತಿಪಕ್ಷಗಳ ಮತಗಳ ಅಳಿಸುವಿಕೆಯಿಂದ ಬಿಜೆಪಿ ಲಾಭ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಗಳಿಂದ 65 ಲಕ್ಷ ಮತದಾರರನ್ನು ಕೈಬಿಟ್ಟಿರುವುದಕ್ಕೆ ಬಿಜೆಪಿಯು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದಿರುವುದು ಈ ಪ್ರಕ್ರಿಯೆಯಿಂದ ಯಾರಿಗೆ ಲಾಭವಾಗಲಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಿದೆ ಎಂದರು.

ಅಪಾರದರ್ಶಕತೆಗಾಗಿ ಚುನಾವಣಾ ಆಯೋಗವನ್ನು ಟೀಕಿಸಿದ ಖರ್ಗೆ,ಮತದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸುವಂತೆ ಆದೇಶಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವನ್ನು ಶ್ಲಾಘಿಸಿದರು.

ಸರಕಾರವು ಕೇಂದ್ರೀಯ ಸಂಸ್ಥೆಗಳಾದ ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ತನ್ನ ರಾಜಕೀಯ ಉದ್ದೇಶಗಳಿಗಾಗಿ ಎಷ್ಟೊಂದು ಬಹಿರಂಗವಾಗಿ ಬಳಸಿಕೊಂಡಿತ್ತೆಂದರೆ ಸರ್ವೋಚ್ಚ ನ್ಯಾಯಾಲಯವೇ ಮಧ್ಯೆ ಪ್ರವೇಶಿಸುವಂತಾಗಿತ್ತು ಎಂದು ಖರ್ಗೆ ಆರೋಪಿಸಿದರು.

ವಿದೇಶಾಂಗ ನೀತಿ ಕುರಿತು ಮಾತನಾಡಿದ ಅವರು, ಭಾರತವು ತನ್ನ ಅಲಿಪ್ತ ನೀತಿಯಡಿ ಒಂದು ಕಾಲದಲ್ಲಿ ಹೊಂದಿದ್ದ ವಿಶೇಷ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದರು. ದೇಶವು ಈಗ ತನ್ನ ನೆರೆಹೊರೆಯಲ್ಲಿ ಮತ್ತು ಅದರಾಚೆಗೆ ನಿಕಟ ಮಿತ್ರರಾಷ್ಟ್ರಗಳ ಕೊರತೆಯನ್ನು ಹೊಂದಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮತದಾನದ ಪಾವಿತ್ರ್ಯದ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಉಲ್ಲೇಖಿಸಿದ ಖರ್ಗೆ, ನ್ಯಾಯಯುತ ಚುನಾವಣೆಗಳು ಪ್ರಜಾಪ್ರಭುತ್ವದ ಬುನಾದಿಯಾಗಿದ್ದು,ಪೂರ್ವಾಗ್ರಹದಿಂದ ಯಾವುದೇ ಅರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಗಳಿಂದ ಹೊರಗಿಡಬಾರದು ಎಂದರು.

ಪಕ್ಷದ ಪರಂಪರೆಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ತಳುಕು ಹಾಕಿದ ಖರ್ಗೆ,ಸ್ವಾತಂತ್ರ್ಯವನ್ನು ಗಳಿಸುವಲ್ಲಿ ಮತ್ತು ಸಂವಿಧಾನವನ್ನು ರೂಪಿಸುವಲ್ಲಿ ಕಾಂಗ್ರೆಸ್ ಪಾತ್ರವನ್ನು ನೆನಪಿಸಿಕೊಂಡರು. ಕಾಂಗ್ರೆಸ್ ಸರಕಾರಗಳು ‘ಒಬ್ಬ ವ್ಯಕ್ತಿ,ಒಂದು ಮತ,ಒಂದು ಮೌಲ್ಯ’ ಎಂಬ ಸಮಾನತೆಯ ಆಧಾರದಲ್ಲಿ ಶಕ್ತಿಶಾಲಿ, ಪ್ರಜಾಸತ್ತಾತ್ಮಕ ಭಾರತಕ್ಕೆ ಅಡಿಪಾಯ ಹಾಕಿದ್ದವು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News