×
Ad

ಮೋದಿ ಇಲ್ಲದೆ ಬಿಜೆಪಿ 150 ಸ್ಥಾನ ಕೂಡ ಗೆಲ್ಲಲು ಸಾಧ್ಯವಿಲ್ಲ: ನಿಶಿಕಾಂತ್ ದುಬೆ

Update: 2025-07-19 13:36 IST

ಬಿಜೆಪಿ ಸಂಸದ ನಿಶಿಕಾಂತ್ ದುಬೆ / ಪ್ರಧಾನಿ ನರೇಂದ್ರ ಮೋದಿ (Photo credit: PTI)

ಹೊಸದಿಲ್ಲಿ: 2014ರಿಂದ ಬಿಜೆಪಿ ಪಕ್ಷದ ಚುನಾವಣಾ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಮೋದಿ ಇಲ್ಲದಿದ್ದರೆ ಪಕ್ಷ ಇಂದು ಇಷ್ಟೊಂದು ಬಲಿಷ್ಠವಾಗುತ್ತಿರಲಿಲ್ಲ ಎಂದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ವರ್ಚಸ್ಸು ಮತ್ತು ರಾಜಕೀಯ ಮತದಾರರನ್ನು ಪ್ರಭಾವಿತಗೊಳಿಸಿದೆ. ಇಲ್ಲದಿದ್ದರೆ ಅವರು ಬಿಜೆಪಿಗೆ ಮತ ಹಾಕುತ್ತಿರಲಿಲ್ಲ ಎಂದು ಜಾರ್ಖಂಡ್ ನ ಗೊಡ್ಡಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅಭಿಪ್ರಾಯಪಟ್ಟಿದ್ದಾರೆ.

ʼಇಂದು, ಮೋದಿಜಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮೋದಿಜಿ ಇಲ್ಲದೆ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲʼ ಎಂದು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಯಶಸ್ಸಿನ ಬಗ್ಗೆ ಮಾತನಾಡುತ್ತಾ ನಿಶಿಕಾಂತ್ ದುಬೆ ಹೇಳಿದರು.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2024ರಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರಕಾರ ರಚಿಸಿದೆ. ಏಕಾಂಗಿಯಾಗಿ 240 ಸ್ಥಾನಗಳನ್ನು ಗೆದ್ದಿದೆ. 2014 ಮತ್ತು 2019ರಲ್ಲಿ ಕ್ರಮವಾಗಿ 282 ಮತ್ತು 303 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಿತ್ತು. ಮೋದಿಜಿ ಬಂದ ನಂತರ, ಹಿಂದೆಂದೂ ಬಿಜೆಪಿಗೆ ಸಿಗದ ಬಡವರ ದೊಡ್ಡ ಮತಬ್ಯಾಂಕ್, ಅವರ ಮೇಲಿನ ನಂಬಿಕೆಯಿಂದ ಪಕ್ಷದ ಕಡೆಗೆ ತಿರುಗಿದೆ. ಕೆಲವರಿಗೆ ಇದು ಇಷ್ಟವಾಗಬಹುದು ಅಥವಾ ಇಲ್ಲದಿರಬಹುದು, ಆದರೆ ಇದು ವಾಸ್ತವ ಎಂದು ನಿಶಿಕಾಂತ್ ದುಬೆ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯ ನೇತೃತ್ವದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಬಿಜೆಪಿಗೆ ಇದೆ. ಬಿಜೆಪಿಗೆ ಮೋದಿಜಿಯ ಅಗತ್ಯವಿದೆ. ಪಕ್ಷದ ಕಾರ್ಯಕರ್ತನಾಗಿ ನಮಗೆ ಮೋದಿಜಿ ನಾಯಕತ್ವ ಬೇಕು ಎಂದು ನಾನು ನಂಬುತ್ತೇನೆ. ನನ್ನ ಹೇಳಿಕೆಗಳನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬಾರದು. ಇದು ನೆಲದ ಮೇಲಿನ ವಾಸ್ತವವಾಗಿದೆ. ಪ್ರಧಾನಿ ಮೋದಿಯ ಹೆಸರು ಮಾತ್ರ ಪಕ್ಷಕ್ಕೆ ನಿರ್ಣಾಯಕ ಮತಗಳನ್ನು ತಂದು ಕೊಡುತ್ತದೆ. ಇದು ಅವರ ನಾಯಕತ್ವದ ಗುಣ ಮತ್ತು ಅವರ ಮೇಲಿನ ಜನರ ನಂಬಿಕೆಗೆ ಸಾಕ್ಷಿಯಾಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ನಮಗೆ ಅವರ ನಾಯಕತ್ವದ ಅಗತ್ಯವಿದೆ ನಿಶಿಕಾಂತ್ ದುಬೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News