×
Ad

ಬಾಂಬ್ ಬೆದರಿಕೆ| ಲಕ್ನೋದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

Update: 2026-01-18 19:31 IST

photo: PTI

ಹೊಸದಿಲ್ಲಿ, ಜ. 17: ದಿಲ್ಲಿಯಿಂದ ಪಶ್ಚಿಮಬಂಗಾಳದ ಬಾಗ್ಡೋಗ್ರಾಕ್ಕೆ ಹಾರಾಟ ನಡೆಸುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರವಿವಾರ ಬೆಳಿಗ್ಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಸಂದರ್ಭ ಭದ್ರತಾ ಸಿಬ್ಬಂದಿ ‘‘ವಿಮಾನದಲ್ಲಿ ಬಾಂಬ್ ಇದೆ’’ ಎಂದು ಕೈಬರೆಹದಲ್ಲಿ ಬರೆದ ಟಿಶ್ಯೂ ಪೇಪರ್ ಅನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡಿಗೋದ 6ಇ-6650 ವಿಮಾನ ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 7.46ಕ್ಕೆ ಸಂಚಾರ ಆರಂಭಿಸಿತ್ತು. ಈ ವಿಮಾನದಲ್ಲಿ 8 ಮಕ್ಕಳು ಸೇರಿದಂತೆ 222 ಮಂದಿ ಪ್ರಯಾಣಿಕರಿದ್ದರು. ಇಬ್ಬರು ಪೈಲಟ್‌ಗಳು ಹಾಗೂ ಐವರು ಸಿಬ್ಬಂದಿ ಇದ್ದರು. ವಿಮಾನ ಸಂಚಾರ ನಿಯಂತ್ರಣ ಸರಿಸುಮಾರು ಬೆಳಗ್ಗೆ 8.46ಕ್ಕೆ ಬಾಂಬ್ ಬೆದರಿಕೆಯ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಬೆಳಗ್ಗೆ ಸುಮಾರು 9.17ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು.

ಕೂಡಲೇ ವಿಮಾನವನ್ನು ‘ಐಸೋಲೇಶನ್ ಬೇ’ಯಲ್ಲಿ ಇರಿಸಲಾಯಿತು. ಅಲ್ಲಿ ಬಾಂಬ್ ನಿಷ್ಕ್ರಿಯ ದಳ, ಭದ್ರತಾ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸಿದರು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ. ಅಗತ್ಯದ ಭದ್ರತಾ ತಪಾಸಣೆಗಳನ್ನು ಕೈಗೊಳ್ಳುವಲ್ಲಿ ವಿಮಾನ ಯಾನ ಸಂಸ್ಥೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News