ದಿಲ್ಲಿ ಕಾಲೇಜುಗಳಿಗೆ ಬಾಂಬ್ ಬೆದರಿಕೆ
ಸಾಂದರ್ಭಿಕ ಚಿತ್ರ | PC: PTI
ಹೊಸದಿಲ್ಲಿ,ಆ.28: ಚಾಣಕ್ಯಪುರಿಯಲ್ಲಿನ ಜೀಸಸ್ ಮತ್ತು ಮೇರಿ ಕಾಲೇಜು ಸೇರಿದಂತೆ ಸುಮಾರು 20 ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿದ್ದು,ಸಮಗ್ರ ತಪಾಸಣೆಯ ಬಳಿಕ ಅವು ಹುಸಿ ಬೆದರಿಕೆಗಳಾಗಿವೆ ಎಂದು ಪೋಲಿಸರು ಘೋಷಿಸಿದ್ದಾರೆ.
ಇಮೇಲ್ ಗಳನ್ನು ರವಾನಿಸಿದ್ದವರು ತಮ್ಮ ಗುರುತು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್) ಬಳಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪೋಲಿಸರು ಇಮೇಲ್‌ಗಳ ಮೂಲವನ್ನು ಪತ್ತೆ ಹಚ್ಚಲು ತನಿಖೆಯನ್ನು ನಡೆಸುತ್ತಿದ್ದಾರೆ.
ಇದು ದಿಲ್ಲಿಯಾದ್ಯಂತ ಇಂತಹ ಬೆದರಿಕೆಗಳ ಸರಣಿಯಲ್ಲಿ ಇತ್ತೀಚಿನದಾಗಿದೆ.
ದಿಲ್ಲಿ ಅಗ್ನಿಶಾಮಕ ದಳದ ಅಧಿಕಾರಿಯೋರ್ವರ ಪ್ರಕಾರ ಆ.22ರಂದು ರಾಷ್ಟ್ರ ರಾಜಧಾನಿಯಲ್ಲಿನ ಸುಮಾರು 100 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು.
‘ಟೆರರೈಜರ್ಸ್ 111’ ಈ ಬೆದರಿಕೆ ಕರೆಗಳನ್ನು ರವಾನಿಸಿದ್ದು, ಆ.18 ಮತ್ತು 20ರಂದು ನಗರದ ಶಾಲೆಗಳಿಗೆ ಇದೇ ಗುಂಪು ಇಂತಹುದೇ ಬೆದರಿಕೆಗಳನ್ನು ಕಳುಹಿಸಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿತ್ತು.
ಆಗಸ್ಟ್ ಆರಂಭದಲ್ಲಿ ದಿಲ್ಲಿಯ ಆರು ಶಾಲೆಗಳು ಇಂತಹುದೇ ಹುಸಿ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದವು.